Saturday, July 2, 2022

Latest Posts

ಬಡವರ ಹೊಟ್ಟೆ ತುಂಬಿಸೋಕೆ ಶಿವನ ರೂಪದಲ್ಲೇ ಬಂದ ಶಿವಂ! ಈತ ಮಾಡಿದ್ದೇನು ಗೊತ್ತಾ?

  • ಹಿತೈಷಿ

ಎಷ್ಟೋ ಮಂದಿಗೆ ಕೊರೋನಾ ‘ಯಮ’ನಂತೆ ಕಂಡಿದೆ. ಇನ್ನೂ ಕೆಲವರಿಗೆ ‘ಸಾಧಿಸುವ ಛಲ’ ನೀಡಿದ ಗುರುವಾಗಿದೆ. ಇನ್ನೂ ಹಲವರಿಗೆ ‘ಜೀವನ ಪಾಠ’ದ ಮುಂದೆ ಮತ್ತೇನಿಲ್ಲ ಅನ್ನೋದನ್ನು ಹೇಳಿಕೊಟ್ಟಿದೆ. ತಿನ್ನೋಕೆ ದುಡ್ಡಿಲ್ಲದೆ ಮನೆ ಮಠ ಮಾರಿಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಬೀದಿಗೆ ಬಿದ್ದ ಹಲವರು ಮಣ್ಣಾಗಿ ಹೋದರೆ ಎಲ್ಲೋ ಕೆಲವರು ಮತ್ತೆ ಎದ್ದಿದ್ದಾರೆ. ತಮ್ಮ ಜೊತೆ ಬಿದ್ದ ಜನರಿಗೆ ಸಹಾಯ ಮಾಡಿದ್ದಾರೆ. ತಾನು ಅನುಭವಿಸಿದ ಕಷ್ಟ ಇನ್ನೊಬ್ಬರು ಅನುಭವಿಸುವುದು ಬೇಡ ಎಂದು ಕಷ್ಟಕ್ಕೆ ಸ್ಪಂದಿಸಿದ್ದಾರೆ..

ಇದೇ ರೀತಿ ಹೊಟ್ಟೆಗೆ ಹಿಟ್ಟಿಲ್ಲದೆ, ರೈಲ್ವೆ ನಿಲ್ದಾಣದಲ್ಲಿ ಗೊತ್ತು ಗುರಿ ಇಲ್ಲದೆ ಮಲಗಿದ್ದ ವ್ಯಕ್ತಿಯೊಬ್ಬ ಇದೀಗ ನೂರಾರು ಜನಕ್ಕೆ ಅನ್ನ ನೀಡುವ ದೇವರು.. ಬದುಕುವ ಛಲ ನೀಡುವ ‘ರಿಯಲ್ ಸ್ಟೋರಿ’ ನಿಮಗಾಗಿ..

ಇವರ ಹೆಸರು ಶಿವಂ, ಮೂಲತಃ ಮಧ್ಯಪ್ರದೇಶದ ಸಿಖಂದ್ ನವರು. 2016ರಲ್ಲಿ ಇಂಜಿನಿಯರಿಂಗ್ ಮುಗಿಸಿದ ಇವರು ತಮ್ಮ ಸ್ನೇಹಿತರ ಸಹಾಯದೊಂದಿಗೆ 20,000 ರೂ. ಹಣ ಪಡೆದು ಒಂದು ಹೊಟೇಲ್ ಪ್ರಾರಂಭಿಸಿದರು. ಆದರೆ 2019ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರು ತಮ್ಮ ವೃತ್ತಿಯನ್ನೇ ನಿಲ್ಲಿಸಿ ಬಿಟ್ಟರು.

ಲಾಕ್ ಡೌನ್ ಸಾಹಸ:
2020ರ ಮಾರ್ಚ್ ನಲ್ಲಿ ಕೊರೋನಾ ಲಾಕ್ ಡೌನ್ ಘೋಷಣೆಯಾದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ‘ಜೀವನದಲ್ಲಿ ಏನು ಮಾಡಬೇಕು ಎಂದು ತಿಳಿಯದೆ ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದು ಪತ್ರ ಬರೆದ ಶಿವಂ, ಸಿಖಂದ್ ನಿಂದ ಇದ್ದ ಒಂದೇ ಒಂದು ಬಸ್ ಹತ್ತಿಕೊಂಡು 400 ಕಿ.ಮೀ ದೂರದ ಇಂದೋರ್ ಗೆ ಹೊರಟರು.

ಫ್ರೀ ಊಟ, ಫುಟ್ ಪಾತ್ ಜೀವನ:

ಮನೆ ಬಿಟ್ಟು ಬಂದ ಶಿವಂ ಅವರ ಹತ್ತಿರ ಇದ್ದಿದ್ದು ಕೇವಲ 500 ರೂ. ಇದರೊಂದಿಗೆ ಇವರು ನಗರದಲ್ಲಿ ಕೊಡುವ ಫ್ರೀ ಊಟದ ಪೊಟ್ಟಣಗಳನ್ನು ಪಡೆದು, ರೈಲ್ವೆ ನಿಲ್ದಾಣದಲ್ಲೇ ಮಲಗುತ್ತಿದರು. ಎಷ್ಟೋ ದಿನ ಹೊಟ್ಟೆಗೆ ಹಿಟ್ಟಿಲ್ಲದೆ, ಒಂದು ಹೊತ್ತಿಗೂ ಪರದಾಡುವಂತಹ ಸ್ಥಿತಿ, ಮೈಗೆ ಸರಿಯಾದ ಬಟ್ಟೆ ಇಲ್ಲದೆ ಪ್ರಯಾಣ ಮಾಡುವಂತಾಗಿತ್ತು.

ಕೊರೋನಾ ಕಾಲದಲ್ಲಿ ಕೆಲಸ:
ಹೊಟೇಲ್ ವೃತ್ತಿಯಲ್ಲೇ ಇದ್ದ ಶಿವಂ ಅವರು ಯಾವುದಾದರೂ ರೆಸ್ಟೋರೆಂಟ್ ನಲ್ಲೇ ಕೆಲಸಕ್ಕೆ ಸೇರುವ ಆಲೋಚನೆ ಹೊಂದಿದ್ದರು. ಆದರೆ ಆಸೆ ಪಟ್ಟ ಕೆಲಸ ಸಿಕ್ಕಿಲ್ಲವಾದರೂ ಸಿಗುವ ಕೆಲಸ ಮಾಡೋಕೆ ಮುಂದಾಗಿ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಅವರಿಗೆ ತಿಂಗಳಿಗೆ 6 ಸಾವಿರ ಸಂಬಳ ಇತ್ತು. ಇದನ್ನು ಹೆಚ್ಚಿಸಲು 2ನೇ ಶಿಫ್ಟ್ ನಲ್ಲಿ ಒಂದು ಅಪಾರ್ಟ್ ಮೆಂಟ್ ನಲ್ಲಿ 8 ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಇದರಿಂದ ಅವರಿಗೆ ಆಹಾರ ಹಾಗೂ ವಾಸ್ತವ್ಯಕ್ಕೆ ತೊಂದರೆಯಾಗಲಿಲ್ಲ.

ಮುಂದೇನು?
ಎಷ್ಟು ದಿನ ಹೀಗೆ ಸೆಕ್ಯುರಿಟಿಯಾಗಿ ಕೆಲಸ ಮಾಡೋದು? ನನ್ನದೇ ಸ್ವಂತ ಕೆಲಸ ಮಾಡಬೇಕೆನ್ನುವ ಮಹದಾಸೆ ಹೊಂದಿದ್ದ ಶಿವಂ ಸೆಪ್ಟೆಂಬರ್ 2020ರ ವೇಳೆಗೆ ಸುಮಾರು 25 ಸಾವಿರ ಹಣ ಸಂಗ್ರಹಿಸಿದ್ದರು.
ಸ್ಥಳೀಯರ ಸಹಾಯದಿಂದ ಒಂದು ಪುಟ್ಟ ಜಾಗವನ್ನು ಬಾಡಿಗೆಗೆ ಪಡೆದು ಅದಕ್ಕೆ ‘Hunger ಲಂಗರ್’ ಎಂದು ಹೆಸರಿಟ್ಟರು. ಇದು ಪುಟ್ಟ ಹೊಟೇಲ್ ಆಗಿದ್ದು, ವ್ಯವಹಾರಕ್ಕೆ ಮಾತ್ರವಲ್ಲದೆ ಬಡವರ ಹೊಟ್ಟೆ ತುಂಬಿಸೋಕು ನೆರವಾಗಬೇಕೆನ್ನುವ ಉದ್ದೇಶ ಶಿವಂ ಅವರದ್ದು.

ಅಂದ ಹಾಗೆ ಇವರ ಅಂಗಡಿಗಳಲ್ಲಿನ ತಿಂಡಿಗಳ ಬೆಲೆ ಎಷ್ಟು ಗೊತ್ತಾ?

ಇಡ್ಲಿ ಸಾಂಬಾರ್ -10 ರೂ.
ಪಲಾವ್ -10 ರೂ.
ಮಸಾಲಾ ದೋಸೆ -10 ರೂ.
ಡೋಖಲ -10 ರೂ.
ಚೋಲೆ ಬಟೋರಾ -30 ರೂ
ಪರಾಟ -30 ರೂ.
ಬೆಲೆ ಕೇಳಿದರೆ ಒಂದು ಕ್ಷಣ ಮೂಗಿನ ಮೇಲೆ ಬೆರಳು ಇಟ್ಟುಕೊಂಡಿದ್ದಂತೂ ಸತ್ಯ ಅಲ್ವಾ? ಆದರೆ ಇದ್ದಕ್ಕೆ ಶಿವಂ

ಅವರ ಉತ್ತರ ಅದ್ಭುತ..
‘ದಿನಕ್ಕೆ 500 ಜನ ಊಟಕ್ಕೆ ಬರ್ತಾರೆ ಅವರಲ್ಲಿ 100-150 ಜನ 30 ರೂ. ತಿಂಡಿ ಸೇವಿಸಿ ಲಾಭ ಕೊಡ್ತಾರೆ. ಮತ್ತೆ ಕೆಲವರು ಡೊನೇಟ್ ಮಾಡುತ್ತಾರೆ. ಹೀಗೆ ನಾನು ಸುಮಾರು 30,000ರೂ. ಸಂಪಾದಿಸುತ್ತೇನೆ. ಹೀಗಿರುವಾಗ ನಾನು ಎಲ್ಲವನ್ನೂ ಲಾಭಕ್ಕಾಗಿಯೇ ಮಾಡೋಕೆ ಆಗೊಲ್ಲ. ನಾನು ಊಟ ಕೊಡುವುದರಲ್ಲಿ ಲಾಭ ಪಡೆಯಬಾರದೆಂದು ನಿರ್ಧಾರ ಮಾಡಿದ್ದೇನೆ’ ಎಂದು ಮುಗುಳ್ನಗುತ್ತ ಉತ್ತರಿಸಿದ್ದಾರೆ. .

ತಾಯಿಯ ಮಾತು:

‘ಮಗ ಮನೆ ಬಿಟ್ಟು ಬಂದಾಗ ತುಂಬಾ ಚಿಂತೆ ಮಾಡಿದ್ದೆವು. ಆದರೆ ಈಗ ಅವನು ತನ್ನ ಕಾಲಿನ ಮೇಲೆ ನಿಂತು ಅವನ ಜೀವನ ರೂಪಿಸಿಕೊಂಡಿರೋದಕ್ಕೆ ಹೆಮ್ಮೆಯಾಗುತ್ತದೆ’ ಎಂದು ಶಿವಂ ತಾಯಿ ಸಂತಸದ ನುಡಿಗಳನ್ನಾಡಿದರು.

ಹೊಟೇಲ್ ಜೀವನ ವೃತ್ತಿಯಲ್ಲ! ಹಾಗಿದ್ದರೆ ಮುಂದೆ?

ಶಿವಂ ಅವರಿಗೆ ಹೊಟೇಲ್ ನನ್ನು ಸೇವೆಗಾಗಿ ನಡೆಸಿ, ವೃತ್ತಿಯಲ್ಲಿ ಜಾಹಿರಾತು ವ್ಯವಹಾರ ಹಾಗೂ ಯೂಟ್ಯೂಬ್ ನಲ್ಲಿ ಅಡುಗೆ ಕಲಿಕೆ ತರಬೇತಿಗಳನ್ನು ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ.ಈ ನಡುವೆ ತಮ್ಮ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೊಟೇಲ್ ಮ್ಯಾನೇಜ್ ಮೆಂಟ್ ಪದವಿ ಪಡೆಯಲು ಸಂಗ್ರಹ ಮಾಡುತ್ತಿದ್ದಾರಂತೆ.

ಈ ರೀತಿ ನಿಜವಾದ ಕಥೆಗಳನ್ನು ಕೇಳಿದರೆ ಮನಸ್ಸಿಗೆ ಸಂತಸವಾಗುತ್ತದೆ. ಎಲ್ಲವೂ ಇದ್ದು ನಾವೇಕೆ ಸುಮ್ಮನಿದ್ದೇವೆ ಎನಿಸುತ್ತದೆ.. ಎಲ್ಲರಿಗು ಸಹಾಯ ಮಾಡಲು ಆಗದಿರಬಹುದು ಆದರೆ ಕೆಲವರಿಗಾದರೂ ಸಹಾಯ ಮಾಡಬಹುದಲ್ಲವೇ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss