ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವಾಚನ ಪಕ್ಷಾಚರಣೆ ಉದ್ಘಾಟನೆ ಮತ್ತು ಪಿ.ಎನ್.ಪಣಿಕ್ಕರ್ ಸಂಸ್ಮರಣೆ ಏತಡ್ಕ ಸಮಾಜ ಮಂದಿರದಲ್ಲಿ ಶುಕ್ರವಾರ ಜರಗಿತು.
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ ಪ್ರವೀಣ ಓಡಂಗಲ್ಲು ಸಂಸ್ಮರಣಾ ಭಾಷಣ ಮಾಡಿ ಉದ್ಘಾಟಿಸಿದರು. ಪಿ.ಎನ್.ಪಣಿಕ್ಕರ್ ಅವರ ಜನನ, ಬಾಲ್ಯ ಮತ್ತು ಜೀವನದ ಮುಖ್ಯ ಘಟ್ಟಗಳನ್ನು ವಿವರಿಸಿದರು.
ಪ್ರಥಮವಾಗಿ ತನ್ನ ಗ್ರಾಮದಲ್ಲಿ ಸನಾತನ ಧರ್ಮ ಎಂಬ ಕಿರು ಗ್ರಂಥಾಲಯವನ್ನು ಸ್ಥಾಪಿಸಿದ ಪಣಿಕ್ಕರ್ ನಂತರ ಅನಕ್ಷರತೆಯ ವಿರುದ್ಧ ಒಂದು ಕ್ರಾಂತಿಯನ್ನೇ ಉಂಟು ಮಾಡಿದರು.
1945 ರಲ್ಲಿ ಕೇರಳದಲ್ಲಿ ತಿರುವಿದಾಂಕೂರು ಗ್ರಂಥಶಾಲಾ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸುಮಾರು 47 ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಿದರು. ಸಾಕ್ಷರತಾ ಚಳವಳಿಗೆ ಬೇಕಾಗಿ ಕಾನ್ ಫೆಡ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು ಎಂದು ಅವರು ತಿಳಿಸಿದರು.
ಪಣಿಕ್ಕರ್ ಅವರು ಕುಟುಂಬ ವಾಚನವನ್ನು ಪ್ರೋತ್ಸಾಹಿಸಿದವರು, ಐಷಾರಾಮಿ ಜೀವನವನ್ನು ತೊಡೆದು ಹಾಕಬೇಕು, ಸಮಾಜ ಬಾಹಿರ ಕೃತ್ಯಗಳನ್ನು ಹೋಗಲಾಡಿಸಬೇಕು ಎಂದು ಕರೆಕೊಟ್ಟವರು.
ಪಣಿಕ್ಕರ್ ಅವರ ಆದರ್ಶ ಜೀವನವನ್ನು ನಾವು ಅಳವಡಿಸಿಕೊಳ್ಳ ಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೈ.ಕೆ. ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ವಂದಿಸಿದರು.