Wednesday, July 6, 2022

Latest Posts

ಬದಿಯಡ್ಕ ಪ್ರಾದೇಶಿಕ ಪತ್ರಕರ್ತರಿಗೆ ನಿತ್ಯೋಪಯೋಗ ಸಾಮಾಗ್ರಿಗಳ ಕಿಟ್ ವಿತರಿಸಿದ “ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್”

ಬದಿಯಡ್ಕ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗುವ ಜನತೆಗೆ ವಿವಿದೆಡೆಗಳಲ್ಲಿ ಸರಕಾರ, ಸಂಘ ಸಂಸ್ಥೆ ಸಹಾಯ ಹಸ್ತ ಚಾಚುತ್ತಿರುವುದು ದಿನನಿತ್ಯದ ಮಾಧ್ಯಮ ಸುದ್ದಿಯಾಗಿದೆ. ಆದರೆ ಸುದ್ಧಿಯನ್ನು ಪ್ರಚಾರಪಡಿಸುವಲ್ಲಿ ಮಾಧ್ಯಮ ವಿಭಾಗದ ಪ್ರಾದೇಶಿಕ ಪತ್ರಕರ್ತರ ಬದುಕು ಬವಣೆಗಳ ಸಂಕಷ್ಟವನ್ನು ಅರಿತವರು ಯಾರು ಇಲ್ಲದಂತಾಗಿದೆ. ತಿಂಗಳು ಗಟ್ಟಲೆಯ ಈ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಪತ್ರಕರ್ತರೂ ಸಂದಿಗ್ದಾವಸ್ಥೆಯಲ್ಲಿ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಎಷ್ಟೋ ಪ್ರಚಾರಪ್ರಿಯರಿಗೆ, ವಿವಿಧ ಪಕ್ಷಗಳಿಗೆ ದಿನನಿತ್ಯ ಪ್ರಚಾರಕ್ಕೆ ಮಾತ್ರ ಪರ್ತಕರ್ತರು ಬೇಕು. ಆದರೆ ಇಂತಹ ಸಂದಿಗ್ದಾವಸ್ಥೆಯಲ್ಲಿ ಮಾಧ್ಯಮ ಮಿತ್ರರನ್ನು ಕೇವಲ ಒಂದು ಪೋನ್ ಕರೆ ಮೂಲಕವಾದರೂ ಕ್ಷೇಮ ಸಮಾಚಾರ ವಿಚಾರಿಸುವವರಿಲ್ಲ, ಸಹಾಯ ನೀಡಲು ಯಾವುದೇ ಸರಕಾರ, ಸನ್ನದ್ಧ ಸಂಘಟನೆಗಳು ಮುಂದೆ ಬಾರದಿರುವುದನ್ನು ಈ ಲಾಕ್ ಡೌನ್ ಅಕ್ಷರಶಃ ಸತ್ಯ ಎಂದು ನಿರೂಪಿಸಿದೆ.

ಹೀಗೆ ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಕುಳಿತ ಬದಿಯಡ್ಕದ ಪ್ರಾದೇಶಿಕ ಪತ್ರಕರ್ತರ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲು ಉಪ್ಪಳ ಸಮೀಪದ ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಹಾಗೂ ಉದ್ಯೋಗಿಗಳು ಮುಂದೆ ಬಂದಿರುವುದು ಕಾಸರಗೋಡು ಜಿಲ್ಲೆಗೆ ಮಾದರಿಯಾಗಿದೆ.

ಪೈವಳಿಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಭಾಗ್, ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಸಿಬ್ಬಂದಿಗಳಾದ ನಿತಿನ್ ಪೈವಳಿಕೆ,ನವೀನ್ ಪೈವಳಿಕೆ, ಸುಗಂಧಿ, ಬಾಲಕೃಷ್ಣ ಶೆಟ್ಟಿ, ರಂಜಿತ್ ಪೂಜಾರಿ, ಸುಖೇಶ್ ಕುಮಾರ್ ಕಲಾಯಿ, ಮನೋಹರ್ ಆಚಾರ್ಯ, ಪ್ರಸಾದ್ ಆಚಾರ್ಯ ಕಯ್ಯಾರ್, ದೀಪಾ ಬಿ.ಕೆ. ಅವರ ಸಹಕಾರದಲ್ಲಿ ಬದಿಯಡ್ಕ ವಲಯದ ಪ್ರಾದೇಶಿಕ ಪತ್ರಕರ್ತರಿಗೆ ನಿತ್ಯೋಪಯೋಗಿ ವಸ್ತುಗಳ ಕಿಟ್ ವಿತರಿಸಿದರು.

ಹಿರಿಯ ಪತ್ರಕರ್ತ ಆಶೋಕ್ ನೀರ್ಚಾಲು ಅವರಿಗೆ ಬ್ಯಾಂಕಿನ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‌ಭಾಗ್ ಕಿಟ್ ನೀಡಿ ವಿತರಣೆಗೆ ಚಾಲನೆಯನ್ನಿತ್ತು ಮಾತನಾಡಿ ಯಾವುದೇ ರಂಗದ ಚಟುವಟಿಕೆಗಳು ಹೊರ ಜಗತ್ತಿಗೆ ತಿಳಿಯಪಡಿಸುವಲ್ಲಿ ಮಾಧ್ಯಮ ಮಿತ್ರರ ಸಹಕಾರ ಅತ್ಯಂತ ಗೌರವಯುತವಾದುದು ಈ ನಿಟ್ಟಿನಲ್ಲಿ ಪತ್ರಕರ್ತರ ಕುಟುಂಬಕ್ಕೂ ತಮ್ಮ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ಇದೊಂದು ಕಿಂಚಿತ್ ಸಹಾಯ ಎಂದರು. ಪತ್ರಕರ್ತರಾದ ಗಂಗಾಧರ ಪಳ್ಳತ್ತಡ್ಕ, ಪುರುಷೋತ್ತಮ ಪೆರ್ಲ, ಹಸನ್ ಬದಿಯಡ್ಕ, ಸುಬೈರ್ ಬಾಪಲಿಪೋನಂ, ಗಂಗಾಧರ ತೆಕ್ಕೆಮೂಲೆ, ರವಿ ನಾಯ್ಕಾಪು, ಜಯ ಮಣಿಯಂಪಾರೆ, ಬಾಲಕೃಷ್ಣ ಅಚ್ಚಾಯಿ, ಪತ್ರಿಕಾ ವಿತರಕ ಬಾಲಕೃಷ್ಣ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಆಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು. ಜನ ಸಾಮಾನ್ಯರ ನೋವು ನಲಿವಿಗೆ, ಸಮಸ್ಯೆಗೆ ಸ್ಪಂದಿಸುವ, ಪತ್ರಕರ್ತರ ಬದುಕಿನ ಸಂಕಷ್ಟಕ್ಕೆ ಸ್ಪಂದಿಸಿದ ಈ ಸೇವಾ ಕಾರ್ಯ ಆದರ್ಶಯುತವಾಗಿದೆ ಎಂದು ಬದಿಯಡ್ಕ ಪತ್ರಕರ್ತರ ಸಂಘಟನೆಯು ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧಿಕೃತರನ್ನು ಮುಕ್ತಕಂಠದಿಂದ ಅಭಿನಂದಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss