ಬದಿಯಡ್ಕ| ಸೇವಾಭಾರತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಂಜಿ ಊಟ, ನೀರು ವಿತರಣೆ

0
153

ಬದಿಯಡ್ಕ: ತಮ್ಮ ಭವಿಷ್ಯದ ಪ್ರಶ್ನೆಗಳಿಗೆ ಉತ್ತರ ಬರೆಯಲು ಹೊರಟ ಹತ್ತನೇ ತರಗತಿಯ ವಿದ್ಯಾರ್ಥಿಗಳ ಮಧ್ಯಾಹ್ನದ ಹಸಿವನ್ನು ನೀಗಿಸುವಲ್ಲಿ ಯುವಮೋರ್ಚಾ ಕಾಸರಗೋಡು ಮಂಡಲ ಹಾಗೂ ಬದಿಯಡ್ಕ ಸೇವಾಭಾರತಿಯ ಕಾರ್ಯವು ಪ್ರಶಂಸನೀಯವಾಯಿತು.

ಕೋವಿಡ್ ಮಹಾಮಾರಿಯಿಂದಾಗಿ ಉಂಟಾದ ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ೧೦ನೇ ತರಗತಿಯ ವಿದ್ಯಾರ್ಥಿಗಳ ಉಳಿದ ಪರೀಕ್ಷೆಗಳು ಮಂಗಳವಾರ ಆರಂಭವಾಗಿತ್ತು. ಬದಿಯಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಈ ವೇಳೆ ಮಧ್ಯಾಹ್ನದ ಹಸಿವನ್ನು ನೀಗಿಸಲು ಸೇವಾಭಾರತಿ ಬದಿಯಡ್ಕ ಹಾಗೂ ಯುವಮೋರ್ಚಾ ಕಾಸರಗೋಡು ಮಂಡಲ ಸಮಿತಿಯ ವತಿಯಿಂದ ವಿದ್ಯಾರ್ಥಿಗಳಿಗೆ ಗಂಜಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಗಂಜಿಯೊಂದಿಗೆ ಉಪ್ಪಿನಕಾಯಿ, ಚಟ್ನಿ, ಮಜ್ಜಿಗೆಯನ್ನೂ ವಿತರಿಸಲಾಗಿತ್ತು. ಇನ್ನುಳಿದ ದಿನಗಳಲ್ಲಿಯೂ ಇದೇ ರೀತಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಕೀರ್ತನ್ ಜೆ.ಕೂಡ್ಲು, ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ ಕಡಾರು, ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ರಕ್ಷಿತ್ ಕೆದಿಲಾಯ, ಹಿತೇಶ್ ಬದಿಯಡ್ಕ, ಶಿವಪ್ರಸಾದ್, ಸೇವಾಭಾರತಿಯ ಕಾರ್ತಿಕ್ ಕಾಮತ್ ಬದಿಯಡ್ಕ, ರಾಜೇಶ್ ರೈ ಬದಿಯಡ್ಕ ಹಾಗೂ ಕಾರ್ಯಕರ್ತರು ಸಹಕರಿಸಿದರು.
ನವಜೀವನ ಶಾಲಾ ಮಕ್ಕಳಿಗೆ ಕುಡಿಯುವ ನೀರು ವಿತರಣೆ : 500 ಮಂದಿ ವಿದ್ಯಾರ್ಥಿಗಳು ಪೆರಡಾಲ ನವಜೀವನ ಶಾಲೆಯಲ್ಲಿ ಪರೀಕ್ಷೆಯನ್ನು ಬರೆಯುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸೇವಾ ಭಾರತಿಯ ವತಿಯಿಂದ ಕುಡಿಯುವ ನೀರನ್ನು ವಿತರಿಸಲಾಯಿತು. ಪಿ.ಎಮ್.ಎಸ್. ಬಸ್‌ನ ವತಿಯಿಂದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದರು.

LEAVE A REPLY

Please enter your comment!
Please enter your name here