ಹೊಸದಿಗಂತ ವರದಿ,ಉಡುಪಿ:
ಇಲ್ಲಿನ ಯಕ್ಷಗಾನ ಕಲಾರಂಗ ಉಡುಪಿ ಸಂಸ್ಥೆಯ ಆಶ್ರಯದಾತರಾಗಿದ್ದ, ಯತಿಶ್ರೇಷ್ಠ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಕಾಸರಗೋಡಿನ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಆಯ್ಕೆಯಾಗಿದೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಸಂಘವು ನಿರಂತರ ಯಕ್ಷಗಾನ ಸಂಶೋಧನೆ, ಪ್ರದರ್ಶನ, ಕಾರ್ಯಾಗಾರಗಳ ಮೂಲಕ ಕ್ರಿಯಾಶೀಲವಾಗಿದೆ. ಪ್ರಶಸ್ತಿಯು 50ಸಾವಿರ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 26ರಂದು ಸಂಜೆ 5ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮತ್ತು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.