Monday, July 4, 2022

Latest Posts

ಬಪ್ಪನಾಡು ಶ್ರೀದುರ್ಗೆಗೆ ಬಂತು ‘ಸ್ವರ್ಣ ಪಲ್ಲಕಿ’

ಕಿನ್ನಿಗೋಳಿ: ಶ್ರೀ ಕ್ಷೇತ್ರ ಬಪ್ಪನಾಡು ಸ್ವರ್ಣ ಪಲ್ಲಕ್ಕಿ ಶೋಭಾ ಯಾತ್ರೆ ಭಗವಂತನ ಮತ್ತು ನಮ್ಮ ನಡುವಿನ ಸಂಬಂಧವು ಬಿಂಬ ಮತ್ತು ಪ್ರತಿಬಿಂಬದಂತಿದ್ದು ಬಿಂಬವು ಅಲಂಕಾರಗೊಂಡಾಗ ಯಾವ ರೀತಿ ಪ್ರತಿಬಿಂಬದಲ್ಲಿ ಕಂಗೊಳಿಸುತ್ತದೆಯೋ ಅದೇ ರೀತಿಯಲ್ಲಿ ಭಗವಂತನಿಗೆ ಸಮಪಿಸುವ ಸೇವೆಯು ನಮಗೆ ಪ್ರತಿಫಲ ರೂಪದಲ್ಲಿ ದೊರೆಯುತ್ತದೆಯೆಂದು ಪೇಜಾವರ ಮಠಾಧೀಶ  ಶ್ರೀ ವಿಶ್ವಪ್ರಸನ್ನ ತೀರ್ಥರು  ಹೇಳಿದರು.

ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ನೇತ್ರತ್ವದಲ್ಲಿ ನಿರ್ಮಿಸಲಾದ  ಸ್ವರ್ಣ ಪಲ್ಲಕ್ಕಿಯ ಶೋಭಾಯಾತ್ರೆಗೆ ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಭಗವಂತನ ಅನುಗ್ರಹದಲ್ಲಿ ಜೀವನದಲ್ಲಿ ಸುಖ, ಸಂಪತ್ತನ್ನು ಪಡೆಯಲು ಸಾಧ್ಯವಿದೆ. ನಮ್ಮಲ್ಲಿ ಮಾದಕ ದ್ರವ್ಯ ಸೇವನೆ ಮತ್ತಿತರ ದುಶ್ಚಟಗಳನ್ನು ಹೊಂದಿರುವ ಅಸುರರಿದ್ದು ಅದನ್ನು ದೂರ ಮಾಡುವ ಕಾರ್ಯವಾಗಬೇಕೆಂದು ಹೇಳಿದರು.

ಶ್ರೀ ಕ್ಷೇತ್ರ ಬಪ್ಪನಾಡಿನ ಆಡಳಿತ ಮೊಕ್ತೇಸರ ಎನ್. ಎಸ್. ಮನೋಹರ ಶೆಟ್ಟಿ, ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು. ಅರ್ಚಕರಾದ ವೇದಮೂರ್ತಿ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್. ದೇವಳದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಗೌರವಾಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜ್ಯೆನ್, ಕಾರ್ಯಾಧ್ಯಕ್ಷ ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ. ಉಪಾಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ, ಎಚ್. ವಿ. ಕೋಟ್ಯಾನ್, ಕಾರ್ಯದರ್ಶಿ ಸುನೀಲ್ ಆಳ್ವ, ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ವೇದಮೂರ್ತಿ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ, ಶ್ರೀ ವೆಂಕಟರಮಣ ದೇವಳದ ಆರ್ಚಕರು, ಆಡಳಿತ ಮಂಡಳಿಯ ಟ್ರಸ್ತಿಗಳು, ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತಿತರರಿದ್ದರು.

ಶೋಭಾಯಾತ್ರೆಯ ಮೆರವಣಿಗೆಯು ಮೂಲ್ಕಿ ಶ್ರೀ ವೆಂಕಟರಮಣ ದೇವಳದಿಂದ ಹೊರಟು ಶ್ರೀ ಕ್ಷೇತ್ರ ಬಪ್ಪನಾಡಿಗೆ ತಲುಪಿ ದೇವಳಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಸಮರ್ಪಿಸಲಾಯಿತು. ಸ್ವರ್ಣ ಪಲ್ಲಕ್ಕಿಯ ಸಂಚಾಲಕ ಅತುಲ್ ಕುಡ್ವ ಸ್ವಾಗತಿಸಿ, ನಿರೂಪಿಸಿದರು.

ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ ಸ್ ಸಂಸ್ಥೆಯಲ್ಲಿ ಚಿನ್ನದ ಪಲ್ಲಕ್ಕಿಯನ್ನು 11 ಕೆ.ಜಿ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಎಲ್ಲ ಭಾಗಗಳನ್ನು ಅದರ ಶುದ್ಧತೆಯ ದೃಢೀಕರಣಕ್ಕಾಗಿ ಬಿಐಎಸ್ ಹಾಲ್ ಮಾರ್ಕ್ ಮಾಡಲಾಗಿದೆ. ಪಲ್ಲಕ್ಕಿಯ ತೂಕವನ್ನು ದೇವಾಲಯದ ಪದಾಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಅನುಮೋದಿಸಿದ್ದಾರೆ. ಅದನ್ನು ಜೋಡಿಸುವಾಗ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಈ ಪಲ್ಲಕ್ಕಿಯ ಕೆಲಸಕ್ಕೆ ಸುಮಾರು ಒಂದುವರೆ ತಿಂಗಳು ತಗುಲಿದ್ದು, 550 ಮಾನವ ದಿನಗಳನ್ನು ಬಳಸಿ ತಯಾರಿಸಲಾಗಿದೆ. ಪಲ್ಲಕ್ಕಿಯ ಪ್ರಸಕ್ತ ಮಾರುಕಟ್ಟೆ ವೆಚ್ಚ 5 ಕೋಟಿ ರೂ.ಗಳಿಗೂ ಮೀರಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss