Wednesday, July 6, 2022

Latest Posts

ಬರೋಬ್ಬರಿ ಎಂಟು ತಿಂಗಳ ಬಳಿಕ ಪದವಿ ಕಾಲೇಜುಗಳು ಪುನರಾರಂಭಗೊಂಡರೂ ಆರಂಭದ ದಿನ ಬಂದ ಬೆರಳೆಣಿಕೆ ವಿದ್ಯಾರ್ಥಿಗಳು!

ಹೊಸ ದಿಗಂತ ವರದಿ, ಚಿತ್ರದುರ್ಗ:

ಎಂಟು ತಿಂಗಳ ಬಳಿಕ ಪದವಿ ಕಾಲೇಜುಗಳು ಪುನರಾರಂಭಗೊಂಡಿದ್ದು, ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋವಿಡ್ -19 ಕಾರಣದಿಂದ ಕಾಲೇಜುಗಳಲ್ಲಿ ಸುರಕ್ಷತಾ ಕ್ರಮಕೈಗೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಲೇಜು ಆರಂಭದ ಮೊದಲ ದಿನವಾದ ಮಂಗಳವಾರ ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಸರ್ಕಾರದ ಸೂಚನೆಯಂತೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಗೆ ಬಿಡಲಾಗುತ್ತಿತ್ತು. ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊದಲ ದಿನದ ಹಾಜರಿ ಕಡಿಮೆ ಇತ್ತು. ಇಂದಿನಿಂದ ಪದವಿ ಕಾಲೇಜುಗಳ ಆರಂಭವಾದ ಹಿನ್ನೆಲೆ ನಗರದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅತೀ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರು.
ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೊದಲು ಕಾಲೇಜಿಗೆ ಕೋವಿಡ್ ಪರೀಕ್ಷೆ ನಡೆಸಿದ ಪತ್ರವನ್ನು ನೀಡಬೇಕು. ನಂತರ ಕಾಲೇಜಿಗೆ ಬರಬೇಕು ಎಂದು ಸೂಚನೆ ನೀಡಲಾಗಿತ್ತು. ಕಾಲೇಜು ಪ್ರಾರಂಭಕ್ಕೆ ಮುನ್ನಾ ದಿನವೇ ಎಲ್ಲಾ ಕಾಲೇಜುಗಳಲ್ಲಿ ಸ್ಯಾನಿಟೈಸರ್ ಮಾಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.
ಕಾಲೇಜು ಪ್ರಾರಂಭದ ದಿನವಾರ ಕಾರಣ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿಲ್ಲ. ಕಳೆದ ಮೂರು ದಿನಗಳಿಂದ ದೀಪಾವಳಿ ಹಬ್ಬದ ಸರ್ಕಾರಿ ರಜೆ ಇರುವುದು ಇದಕ್ಕೆ ಕಾರಣವಾಗಿದೆ. ರಜೆಯಿಂದಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೋವಿಡ್ ಪರೀಕ್ಷೆ ಮಾಡಿಸಿ ವರದಿ ಪಡೆಯಲು ಸಾಧ್ಯವಾಗಿಲ್ಲ. ಕೋವಿಡ್ ನಡುವೆಯೂ ಕಾಲೇಜಗಳನ್ನು ಆರಂಭಿಸಿರುವುದು ಮಕ್ಕಳಲ್ಲಿ ಆತಂಕ ಉಂಟು ಮಾಡಿರಬಹುದು ಎಂದು ಕಾಲೇಜಿನ ಪ್ರಾಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರ್ಕಾರಿ ಕಲಾ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್‌ಗಳನ್ನು ಹಾಕಲಾಗಿದೆ. ವಿವಿಧ ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿಧ್ಯಾರ್ಥಿನಿಯರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ವರದಿ ಸಲ್ಲಿಸಿದರು. ಮತ್ತೆ ಕೆಲವು ಕಾಲೇಜುಗಳಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ವಿದ್ಯಾರ್ಥಿಗಳ ಆಗಮನಕ್ಕೆಂದು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಮಕ್ಕಳು ಮಾತ್ರ ಕಾಲೇಜುಗಳಿಗೆ ಬರಲು ಹಿಂದೇಟು ಹಾಕಿದಂತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss