ಬರೋಬ್ಬರಿ ನಾಲ್ಕು ತಲೆಮಾರುಗಳ ಹಿರಿಯರು-ಮಕ್ಕಳು ಬಳಸಿದ್ರೂ, 70 ವರ್ಷ ಪ್ರಾಯದ ಇಂಗ್ಲೆಂಡ್ ಮೂಲದ ‘ಸನ್’ಗೆ ತುಕ್ಕು ಹಿಡಿದಿಲ್ಲ. ವೇಗಕ್ಕೆ ಬ್ರೇಕ್ ಬಿದ್ದಿಲ್ಲ, ಕೆಟ್ಟು ಕೈಕೊಟ್ಟಿಲ್ಲ.
ಅಂದ ಹಾಗೆ ಇಂಗ್ಲೆಂಡ್ನ ಕಾಲ್ಟನ್ ಕಾರ್ಖಾನೆಯಲ್ಲಿ ನಿರ್ಮಿತ ‘ಸನ್’ ಬೈಸಿಕಲ್ನ ಮೂಲ ವಾರೀಸುದಾರ, ಕೇರಳದ ಮುನ್ನಾರ್ ನ ಕಣ್ಣನ್ ದೇವನ್ ಹಿಲ್ಸ್ ಟೀ ಕಂಪೆನಿಯ ಮಾಜಿ ಹಿರಿಯ ಕಾರ್ಯದರ್ಶಿ ಮಾರ್ಷಲ್ ಎ. ಪಿರೇರಾ.
ಪಿರೇರಾರಿಗೆ ಈ ಸೈಕಲ್ನ್ನು ಹಡಗಿನಲ್ಲಿ ದುಡೀತಿದ್ದ ಸ್ನೇಹಿತ ಜಾನ್ 1950ರಲ್ಲಿ ಉಡುಗೊರೆಯಾಗಿ ನೀಡಿದ್ದ. ಮಾರ್ಷಲ್ ‘ಸನ್’ನನ್ನು ಎಷ್ಟು ನೆಚ್ಚಿಕೊಂಡಿದ್ದರೆಂದರೆ, ಅಂದಿನ ದಿನಗಳಲ್ಲಿ ನಿತ್ಯ ಸಂಜೆ ಕಣ್ಣನ್ ದೇವನ್ ಕ್ಲಬ್ನಲ್ಲಿ ಟೆನ್ನಿಸ್ ಆಡಲು ತೆರಳುತ್ತಿದ್ದುದು ಇದೇ ಸೈಕಲ್ನಲ್ಲಿ!
ಪಿರೇರಾ ಕಾಲಾನಂತರ ಇವರ ಪುತ್ರಿ ಶರ್ಲೀ ಪೌಲ್ ಸಹಿತ ಇಬ್ಬರು ಪುತ್ರರು ಕೂಡಾ ಸನ್ನಲ್ಲಿ ಓಡಾಡ್ತಿದ್ದರು. ನಂತರದ ದಿನಗಳಲ್ಲಿ ಇವರ ಮಕ್ಕಳು ಅಂದ್ರೆ ಪಿರೇರಾರ ಮೊಮ್ಮಕ್ಕಳಿಗೂ ‘ಸನ್’ ಆಪ್ತಮಿತ್ರನಾಗಿದ್ದ. ಮೊಮ್ಮಕ್ಕಳು ಶಾಲಾ-ಕಾಲೇಜ್ಗೆ ಓಡಾಡ್ತಿದ್ದುದು ಇದೇ ಸನ್ನಲ್ಲಿ. ಇದೀಗ ನಾಲ್ಕನೇ ತಲೆಮಾರಿನ ಮಕ್ಕಳು ಅಥವಾ ಪಿರೇರಾರ ಮರಿ ಮಕ್ಕಳು ಕೂಡಾ ಇದೇ ಸೈಕಲ್ನಲ್ಲಿ ಶಾಲೆಗೆ ತೆರಳುತ್ತಿದ್ದಾರೆ. ಒಂದೆರಡು ಬಾರಿ ‘ಸನ್’ನ ಹೆಡ್ಲೈಟ್ಗಳು ಕಳವಾದ್ದು ಬಿಟ್ಟರೆ, ಲೋಪರಹಿತ ಗಟ್ಟಿಮುಟ್ಟಾದ ಸೈಕಲ್ ‘ಸನ್’ ನಮ್ಮ ಕುಟುಂಬದ ಸದಸ್ಯನೇ ಆಗಿರುವ ಎಂದು ಮೆಚ್ಚುಗೆ ವ್ಯಕ್ತಪಡಿಸ್ತಾರೆ. ಪಿರೇರಾರ ಮೊಮ್ಮಗ ಜಾನ್ ಪೌಲ್. ಜೂ.3 ವಿಶ್ವ ಬೈಸಿಕಲ್ ದಿನ. ಅಂದು ‘ಸನ್’ ಜೊತೆಗಿನ ಪಿರೇರಾ ಕುಟುಂಬದ ನಂಟನ್ನು ಬಿಚ್ಚಿಡುವ ಹಲವು ಫೋಟೋಗಳನ್ನು ಜಾನ್ ಪೌಲ್ ಬಿಡುಗಡೆ ಮಾಡಿದ್ದಾರೆ.