Friday, March 5, 2021

Latest Posts

ಬರೋಬ್ಬರಿ 2 ಕೋಟಿ ರೂ. ವೆಚ್ಚದ ಪಳ್ಳತ್ತೂರಿನ ಸರ್ವಋತು ಸೇತುವೆ ಲೋಕಾರ್ಪಣೆ: ಕಾಸರಗೋಡು-ಪುತ್ತೂರು ಸಂಚಾರ ಸಲೀಸು

ಹೊಸ ದಿಗಂತ ವರದಿ, ಪುತ್ತೂರು:

ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆ ಮುತುವರ್ಜಿಯಿಂದ ಪಳ್ಳತ್ತೂರಿನಲ್ಲಿ  ಸರ್ವಋತು ಸೇತುವೆ ಮತ್ತು ಸಂಪರ್ಕ ರಸ್ತೆ ಲೋಕಾರ್ಪಣೆ ಗೊಂಡಿದೆ. ಈ ಮೂಲಕ ಹಲವು ಸಂಪರ್ಕಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಭಾಗದ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡಿದೆ.

ಪ್ರಧಾನ ಸಮಸ್ಯೆಯಾಗಿತ್ತು…
ಪುತ್ತೂರು ತಾಲೂಕಿನಲ್ಲಿ ಗಡಿಯಂಚಿನಲ್ಲಿ ಕೇರಳದ ಕಾಸರಗೋಡು ಇದೆ. ಕಾಸರ ಗೋಡು  ಮತ್ತು ಪುತ್ತೂರು ತಾಲೂಕಿನ ಗಡಿಯ ನಡುವೆ ಪಳ್ಳತ್ತೂರು ಎಂಬಲ್ಲಿ ನದಿ ಹರಿಯುತ್ತಿದೆ. ಉಭಯ ತಾಲೂಕುಗಳನ್ನು ಸಂಪರ್ಕಿಸಲು ಇಲ್ಲಿ ಸರ್ವಋತು ಸೇತುವೆ ಇಲ್ಲದಿರುವುದು ಪ್ರಧಾನ ಸಮಸ್ಯೆಯಾಗಿತ್ತು.
ಉದುಮ ವಿಧಾನಸಭಾ ಕ್ಷೇತ್ರದಲ್ಲಿದೆ…
ಪಳ್ಳತ್ತೂರು ಸೇತುವೆ ಕಾಸರಗೋಡು ಜಿಲ್ಲೆಯ ಗಡಿಗ್ರಾಮ ದೇಲಂಪಾಡಿ ಗ್ರಾಮದಲ್ಲಿದೆ. ಕಾಸರ ಗೋಡು ಜಿಲ್ಲೆಯ ಉದುಮ ವಿಧಾನಸಭಾ ಕ್ಷೇತ್ರದಲ್ಲಿದೆ. ದೇಲಂಪಾಡಿ ಗ್ರಾಮವು ಉದುಮ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಉದುಮ ಶಾಸಕ ಕೆ. ಕುಂಞಿರಾಮ ಈಗ ಕೇರಳದ ಆಡಳಿತ ಪಕ್ಷ ಎಡರಂಗದ ಶಾಸಕರಾಗಿದ್ದಾರೆ. ತನ್ನ ಕ್ಷೇತ್ರದ ಗಡಿಯಲ್ಲಿರುವ ಪಳ್ಳತ್ತೂರಿಗೆ ರೂ. 2 ಕೋಟಿ ವೆಚ್ಚದಲ್ಲಿ ಸರ್ವಋತು ಸೇತುವೆ ನಿರ್ಮಿಸಿ ಕೊಡುವಲ್ಲಿ ಲೋಕೋಪಯೋಗಿ ಇಲಾಖೆ ಯಶಸ್ವಿಯಾಗಿದ್ದಾರೆ.

ಸೇತುವೆಯಮದ ಹಲವು ಪ್ರಯೋಜನಗಳು…
ಭೌಗೋಳಿಕವಾಗಿ ದೇಲಂಪಾಡಿ, ಅಡೂರು, ಕುಂಟಾರು, ಮುಳ್ಳೇರಿಯ ಪ್ರದೇಶಗಳು, ಕಾಸರ ಗೋಡು ತಾಲೂಕಿಗೆ ಸೇರಿ ಹೋದರೂ ಪುತ್ತೂರಿ ನೊಂದಿಗೆ ಈ ಪ್ರದೇಶಗಳು ಶೈಕ್ಷಣಿಕ, ವಾಣಿಜ್ಯ ಸಂಪರ್ಕವನ್ನು ಹೊಂದಿವೆ. ಪುತ್ತೂರು-ಕೊಟ್ಯಾಡಿ, ಪುತ್ತೂರು-ಅಡೂರು, ಪುತ್ತೂರು-ಕುಂಟಾರು ನಡುವಣ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸುತ್ತಿವೆ. ದೇಲಂಪಾಡಿ, ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ನಡುವೆ ಕೇರಳದ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿವೆ. ಹಿಂದೆ ಸರ್ವಋತು ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಮುಳುಗು ಸೇತುವೆ ಜಲಾವೃತಗೊಳ್ಳುವ ಕಾರಣ ಮಳೆಗಾಲದಲ್ಲಿ ಇಲ್ಲಿ ಬಸ್‌ಗಳ ಓಡಾಟ ನಡೆಯುತ್ತಿರಲಿಲ್ಲ. ಒಂದು ಸೇತುವೆಯು ಉಭಯ ರಾಜ್ಯಗಳ ಗಡಿ ಭಾಗ
ದವರಿಗೆ ಸಂಪರ್ಕ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.

ಪರ್ಯಾಯ ರಸ್ತೆ…
ಹಾಲಿ ಪುತ್ತೂರಿನಿಂದ ಕಾಸರಗೋಡನ್ನು ಸಂಪರ್ಕಿಸಲು ಪುತ್ತೂರು- ಪಾಣಾಜೆ ಅಥವಾ ಪುತ್ತೂರು-  ವಿಟ್ಲ-ಅಡ್ಯನಡ್ಕ ಮಾರ್ಗವಾಗಿ ತೆರಳಬೇಕು. ಪಳ್ಳತ್ತೂರಿನಲ್ಲಿ ಸರ್ವಋತು ಸೇತುವೆಯಾದ ಹಿನ್ನೆಲೆಯಲ್ಲಿ ಈಗ ಪುತ್ತೂರು- ಈಶ್ವರಮಂಗಲ- ಪಳ್ಳತ್ತೂರು- ಕೊಟ್ಯಾಡಿ- ಮುಳ್ಳೇರಿಯ-ಚೆರ್ಕಳ ಮೂಲಕ ಕಾಸರಗೋಡಿಗೆ ತೆರಳಲು ಇದೊಂದು ಪರ್ಯಾಯ ರಸ್ತೆಯಾಗಿ ಬಳಕೆಯಾಗುತ್ತಿದೆ. ಪುತ್ತೂರು ತಾಲೂಕಿನ ಮಾಡ್ನೂರಿನಿಂದ ಅಡೂರುವರೆಗೆ ಅಂತರ್‌ರಾಜ್ಯ ಹೆದ್ದಾರಿ ಇದೆ. ಕೊಟ್ಯಾಡಿಯಲ್ಲಿ ಈ ಅಂತಾರಾಜ್ಯ ಹೆದ್ದಾರಿಯು ಜಾಲ್ಸೂರು-ಚೆರ್ಕಳ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ.

ಧಾರ್ಮಿಕ ಕ್ಷೇತ್ರಗಳಿಗೂ ಇದು ಸಂಪರ್ಕ ಸೇತು…
ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯ ಪಳ್ಳತ್ತೂರು ಸೇತುವೆ ನಿರ್ಮಾಣದಿಂದಾಗಿ ಕಾಸರಗೋಡು ಮತ್ತು ಪುತ್ತೂರು ತಾಲೂಕಿನ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸಲು ಅನುಕೂಲವಾಗಿದೆ. ಪುತ್ತೂರು ತಾಲೂಕಿನ ಪಡುಮಲೆ, ಹನುಮಗಿರಿ, ಗೆಜ್ಜೆಗಿರಿ ಮೊದಲಾದ ಧಾರ್ಮಿಕ ಪ್ರಸಿದ್ಧಿಯ ಕ್ಷೇತ್ರಗಳನ್ನು ಕಾಸರಗೋಡು ತಾಲೂಕಿನ ಅಡೂರು, ಮಲ್ಲ ಕ್ಷೇತ್ರಗಳನ್ನು ಸಂಪರ್ಕಿಸಲು ಅತ್ಯಂತ ಅನುಕೂಲವಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss