ಹೊಸ ದಿಗಂತ ವರದಿ, ಬಳ್ಳಾರಿ:
ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎನ್ನುವದಕ್ಕೆ ಇಲ್ಲಿನ ಅನಕ್ಷರಸ್ಥೆ ಮಹಿಳೆಯೊಬ್ಬಳು ಇತರರಿಗೆ ಮಾದರಿಯಾಗಿದ್ದು, ಒಂದಲ್ಲ, ಎರಡಲ್ಲ ಬರೋಬ್ಬರಿ 6 ಬಾರಿ ವಿದೇಶ ಪ್ರಯಾಣ ಮಾಡಿ ಗಮನಸೆಳೆದಿದ್ದಾರೆ.
ಜಿಲ್ಲೆಯ ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆಯ ಮಹಾ ಲಕ್ಷ್ಮೀ ಕನ್ನಡ ಮತ್ತು ಕಸೂತಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಂತಿಬಾಯಿ ಎನ್ನುವವರು ಕಡು ಬಡತನ ಕುಟುಂಬದಲ್ಲಿ ಜನಿಸಿದ್ದಾರೆ. ಸಂಸಾರವೆಂಬ ಜಂಜಾಟದ ಮಧ್ಯೆ ತಮ್ಮ ಲಂಬಾಣಿ ಸಮುದಾಯದ ಉಡುಗೆ, ತೊಡುಗೆಗಳಿಗೆ ಆಕರ್ಷಕ ವಸ್ತ್ರವಿನ್ಯಾಸ ಮಾಡುವ ಮೂಲಕ ದೇಶ-ವಿದೇಶಗಳಲ್ಲಿ ಸದ್ದು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಸಂಡೂರು ತಾಲೂಕಿನ ಸುಶೀಲಾನಗರದ ನಿವಾಸಿಯಾದ ಶಾಂತಿಬಾಯಿ ಅವರು ಅನಕ್ಷರಸ್ಥೆಯಾಗಿದ್ದರೂ, ಅವರಿವರ ನೆರವಿನೊಂದಿಗೆ ಕಳೆದ10 ವರ್ಷಗಳ ಹಿಂದೆ ಈ ಕಸೂತಿ ಘಟಕ ಕೇಂದ್ರಕ್ಕೆ ದಿನಗೂಲಿ ನೌಕರಿಗಾಗಿ ಸೇರಿಕೊಂಡರು. ಆರಂಭದಲ್ಲಿ ಬಂಜಾರ ಸಮುದಾಯದ ಉಡುಗೆ, ತೊಡುಗೆಗಳ ವಸ್ತ್ರವಿನ್ಯಾಸ ಸ್ವರೂಪದ ಬಗ್ಗೆ ಅಲ್ಪಸ್ವಲ್ಪ ಅರಿತುಕೊಂಡಿದ್ದ ಇವರು, ನಂತರ ಇದನ್ನೇ ಮುಂದುವರೆಸಿ ಸಾಧನೆಯ ಶಿಖರದತ್ತ ಸಾಗಿ ಸಾಧನೆಗೆ ಛಲವೊಂದಿದ್ದರೇ ಸಾಕು ಎನ್ನುವುದನ್ನು ಸಾಬೀತು ಪಡೆಸಿದ್ದಾರೆ. ಅವರ ವಸ್ತ್ರವಿನ್ಯಾಸಗಳಿಗೆ (ಡ್ರೆಸ್ಗೆ) ಎಲ್ಲಿಲ್ಲದ ಬೇಡಿಕೆ ಬಂದಿದೆ. ಅವರ ಅತ್ಯುತ್ತಮ ವಸ್ತ್ರವಿನ್ಯಾಸದ ಕೈಚಳಕಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಕೂಡ ಬಂದಿವೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರಬೇಕಿದ್ದ ಪತಿ ವಿಪರೀತ ಮದ್ಯ ಸೇವನೆಯಿಂದ ಮೃತಪಟ್ಟ ಬಳಿಕ ಸಂಸಾರವನ್ನು ಮುನ್ನಡೆಸುವ ಜವಾಬ್ದಾರಿಯ ಇವರ ಹೆಗಲಿಗೇರಿದೆ. ಬಂಜಾರ ಸಮುದಾಯದ ಉಡುಗೆ, ತೊಡುಗೆಗಳಿಗೆ ದೇಶ-ವಿದೇಶಗಳಿಂದ ಎಲ್ಲಿಲ್ಲದ ಬೇಡಿಕೆ ಬರಲಿದೆ ಎನ್ನುವ ಕಲ್ಪನೆಯೂ ಅವರಲ್ಲಿರಲಿಲ್ಲ, ಇವರ ಶ್ರಮಕ್ಕೆ ತಕ್ಕಂತೆ ಫಲ ದೊರೆತಿದೆ.
6 ಬಾರಿ ವಿದೇಶಿ ಪ್ರವಾಸ
ಸಂಡೂರು ಪಟ್ಟಣದ ಈ ಕಸೂತಿ ಘಟಕಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆಯುತ್ತಿದ್ದಂತೆಯೇ ಘಟಕದ ಮುಖ್ಯಸ್ಥೆ ಲೈಲಾಜೀ ಅವರೊಂದಿಗೆ ಮೊದಲ ಬಾರಿಗೆ ಸ್ವೀಡನ್ ದೇಶದ ಪ್ರವಾಸ ಕೈಗೊಂಡರು. ದೇಶದ ಎಲ್ಲ ರಾಜ್ಯಗಳಿಂದ ವಿವಿಧ ಗಣ್ಯರು ಆಗಮಿಸಿದ್ದರು. ಈ ವೇಳೆ ಅವರವರ ರಾಜ್ಯದ ಕ್ರಾಫ್ಟ್ಅನ್ನು ಅಲ್ಲಿ ಪ್ರದರ್ಶಿಸುವುದನ್ನು ಗಮನಿಸುತ್ತಿದ್ದರು.ಮೊದಲ ಬಾರಿಗೆ ರಾಜ್ಯದ ಬಳ್ಳಾರಿ ಮುಲದ ಕಸೂತಿ ಘಟಕದಲ್ಲಿ ವಿನ್ಯಾಸಗೊಳ್ಳುತ್ತಿರುವ ಬಂಜಾರ ಸಮುದಾಯದ ಉಡುಗೆ, ತೊಡುಗೆಗಳು ಗಮನಸೆಳೆದಿದ್ದವು. ಆ ದೇಶದ ಜನರಿಗೆ ಈ ವಸ್ತ್ರವಿನ್ಯಾಸವು ಅತ್ಯಾಕರ್ಷಕವಾಗಿತ್ತು. ನಂತರ ಅಮೆರಿಕಗೆ ಎರಡು ಬಾರಿ ಪ್ರಯಾಣ ಮಾಡಿ ಗಣಿಜಿಲ್ಲೆಯ ಕೀರ್ತೀ ಹೆಚ್ಚಿಸಿದ್ದಾರೆ.
ಸ್ವಿಡ್ಜರ್ ಲ್ಯಾಂಡ್, ಚೀನಾ ದೇಶಗಳಿಗೆ ತಲಾ ಬಾರಿ ಪ್ರಯಾಣ ಮಾಡಿದ್ದು. ಇತ್ತೀಚೆಗೆ ಸಿಂಗಾಪುರಕ್ಕೆ ತೆರಳಿದ್ದರು.