ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಒಂದು ವಾಹನವನ್ನು ಎಷ್ಟು ವರ್ಷ ಬಳಸಬಹುದು?
ಹತ್ತು ವರ್ಷ? ಹದಿನೈದು? ಇಪ್ಪತ್ತು?
ಇಲ್ಲೊಬ್ಬರು 77 ವರ್ಷ ಒಂದೇ ವಾಹನವನ್ನು ಬಳಸಿ ದಾಖಲೆ ಬರೆದಿದ್ದಾರೆ. ಇವರ ಹೆಸರು ಅಲನ್ ಸ್ವಿಫ್ಟ್. ಅಮೆರಿಕದವರು. ಅವರೀಗ ಜೀವಂತವಾಗಿಲ್ಲ ಆದರೆ, ಅವರು ತಮ್ಮ ಐಶಾರಾಮಿ ರೋಲ್ಸ್ ರಾಯ್ಸ್ ಕಾರಿನ ಜೊತೆ ನಿಂತಿರುವ ಹಳೆಯ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ.
ಅವರ ಬಗ್ಗೆ ಮಾಹಿತಿ ಹುಡುಕಿದಾಗ ಸಿಕ್ಕಿದ್ದು ಇಷ್ಟು…
ಅಲನ್ ಸ್ವಿಫ್ಟ್ ತಮ್ಮ 24ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಕಾರೊಂದನ್ನು ಖರೀದಿಸಿದ್ದರು. ಅದಾದ ಬಳಿಕ ಮತ್ತೊಂದು ಕಾರನ್ನೂ ಅವರು ಖರೀದಿಸಿದ್ದರು. ನಂತರ ಅವರ 26ನೇ ಹುಟ್ಟುಹಬ್ಬದ ಸಂದರ್ಭ ತಂದೆ ಕೊಟ್ಟ ಗಿಫ್ಟ್ ಈ ರೋಲ್ಸ್ ರಾಯ್ಸ್ !
ಇದಲ್ಲದೆ ಅಲನ್ಗೆ ಆ ಕಾಲದ ಐಶಾರಾಮಿ ವಾಹನವಾದ ರೋಲ್ಸ್ ರಾಯ್ಸ್ ಕಾರುಗಳ ಬಗ್ಗೆ ವಿಶೇಷ ಒಲವಿತ್ತು. ಅವರು ಅಮೆರಿಕದ ಸ್ಪ್ರಿಂಗ್ಫೀಲ್ಡ್ ನಗರದಲ್ಲಿ ರೋಲ್ಸ್ ರಾಯ್ಸ್ ಕಾರುಗಳ ವಸ್ತುಸಂಗ್ರಹಾಲಯವನ್ನು ಕೂಡಾ ನಿರ್ಮಿಸಿದ್ದರು. ಈ ವಸ್ತುಸಂಗ್ರಹಾಲಯದಲ್ಲಿ ಅವರು, ಅವರ ತಂದೆ ಹಾಗೂ ಸಹೋದರರು ಬಳಸುತ್ತಿದ್ದ ರೋಲ್ಸ್ ರಾಯ್ಸ್ ಕಾರುಗಳನ್ನು ಪ್ರದರ್ಶಿಸಿದ್ದರು.