ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನವೆಂಬರ್ 25ರಿಂದ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ‘ನಿವಾರ್ ‘ ಚಂಡಮಾರುತ ಹೆಜ್ಜೆ ಇಡುತ್ತಿದ್ದು, ಇದರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯ ನೈರುತ್ಯ ಮತ್ತು ಅದರ ಪಕ್ಕದ ಆಗ್ನೇಯ ಭಾಗಗಳಲ್ಲಿರುವ ಕಡಿಮೆ ಒತ್ತಡದ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳಲಿದ್ದು, ಈ ಹಿನ್ನೆಲೆ ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿಯಲ್ಲಿನ ಮೀನುಗಾರರಿಗೆ ಮುನ್ಸೂಚನೆ ನೀಡಲಾಗಿದೆ.
ಭಾನುವಾರದಿಂದ ಬಂಗಾಳಕೊಲ್ಲಿಯ ನೈಋತ್ಯ ಮಾರುತಗಳು 100 ಕಿ. ಮೀ ವೇಗದಲ್ಲಿ ಬೀಸಲಿದೆ.
ನಿವಾರ್ ಚಂಡಮಾರುತ ನವೆಂಬರ್ 22 ರಿಂದ 25 ರ ವರೆಗೆ ನೈಋತ್ಯ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿ, ಮನ್ನಾರ್ ಕೊಲ್ಲಿ ಮತ್ತು ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪ್ರದೇಶ ಕರಾವಳಿಗಳಲ್ಲಿ ಹಾದು ಹೋಗುವ ನಿರೀಕ್ಷೆಗಳಿವೆ ಎಂದು ವರದಿ ತಿಳಿಸಿದೆ.
ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ತಮಿಳುನಾಡು, ಆಂಧ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಅನಿಯಮಿತ ಗಾಳಿ ಮಳೆ ನಿರೀಕ್ಷಿಸಬಹುದು. ತೆಲಂಗಾಣದಲ್ಲೂ ನವೆಂಬರ್ 24 ರಿಂದ 26ರನಕ ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.