ನವದೆಹಲಿ: ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಿತ್ಯಾನಂದ ತನ್ನ ‘ಕೈಲಾಸ ದೇಶ’ದ ನೋಟುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾನೆ!
ತಾನು ದ್ವೀಪದಲ್ಲಿ ಸ್ಥಾಪಿಸಿರುವ ಕೈಲಾಸ ದೇಶದ ನೋಟುಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಕೈಲಾಸದ ರಿಸರ್ವ್ ಬ್ಯಾಂಕ್ ಈ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗ ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ ‘ಕೈಲಾಸದ ರಿಸರ್ವ್ ಬ್ಯಾಂಕ್ನ್ನು ಗಣಪತಿ ಹಾಗೂ ಪರಶಿವರಿಗೆ ಅರ್ಪಣೆ’ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಏನಿದು ಕೈಲಾಸ ದೇಶ?
ತಲೆಮರೆಸಿಕೊಂಡಿರುವ ನಿತ್ಯಾನಂದ ಈಗಾಗಲೇ ಒಂದು ದ್ವೀಪವನ್ನು ಕೊಂಡುಕೊಂಡು ಅದಕ್ಕೆ ಕೈಲಾಸವೆಂದು ನಾಮಕರಣ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಈಗಾಗಲೇ ಅನೇಕ ದೇಶಗಳ ಜನರು ವೀಸಾಗೆ ಅರ್ಜಿ ಹಾಕಿದ್ದು ಅವರೆಲ್ಲರೂ ಈ ದೇಶಕ್ಕೆ ಬರಲು ಆಸಕ್ತಿಯನ್ನು ತೋರಿದ್ದಾರೆ ಎಂದು ಕೂಡಾ ಹೇಳಿಕೊಂಡಿದ್ದ. ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಿತ್ಯಾನಂದ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದಾನೆ ಮಾತ್ರವಲ್ಲ; ಕೈಲಾಸ ದೇಶದ ಬಗ್ಗೆ ರಸವತ್ತಾಗಿ ಹೇಳಿಕೆ ನೀಡುತ್ತಿದ್ದಾನೆ. ಶನಿವಾರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ತಾನು ದ್ವೀಪದಲ್ಲಿ ಸ್ಥಾಪಿಸಿರುವ ಕೈಲಾಸ ದೇಶದ ನೋಟುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ಎಲ್ಲಿದ್ದಾನೆ ಗೊತ್ತಿಲ್ಲ!
ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಈ ಬಿಡದಿ ಸ್ವಾಮಿ ನೇಪಾಳ ಮೂಲಕ ಪಲಾಯನಗೈದಿದ್ದಾನೆ ಎಂದು ಹೇಳಲಾಗುತ್ತಿದ್ದರೂ ಆತ ಎಲ್ಲಿದ್ದಾನೆ ಎಂಬುದು ಪತ್ತೆಯಾಗಿಲ್ಲ. ಆದರೆ ಆಗಾಗ ಜಾಲತಾಣದಲ್ಲಿ ಕಾಣಿಸಿಕೊಂಡು. ತಾನು ಕೈಲಾಸ ದೇಶ ನಿರ್ಮಿಸಿರುವೆ ಇಲ್ಲಿಗೆ ನಾನೇ ಪ್ರಧಾನಿ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೆ ಇಲ್ಲಿಗೆ ಬರುವ ಭಕ್ತರಿಗೆ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸಹ ಹೇಳಿಕೊಂಡಿದ್ದಾನೆ.