Wednesday, June 29, 2022

Latest Posts

ಬಳ್ಳಾರಿಯಲ್ಲಿ ರಸಗೊಬ್ಬರ ಸರಬರಾಜು ಸಮರ್ಪಕ: ರಸಗೊಬ್ಬರ ಕಡ್ಡಾಯವಾಗಿ ಪಿಒಎಸ್ ಯಂತ್ರದ ಮೂಲಕ ರೈತರಿಗೆ ವಿತರಣೆ:ಮುದಗಲ್

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರಸಗೊಬ್ಬರವನ್ನು ಕಡ್ಡಾಯವಾಗಿ ಪಿಒಎಸ್ ಯಂತ್ರದ ಮೂಲಕವೇ ರೈತರಿಗೆ ವಿತರಣೆಯಾಗಬೇಕು ಮತ್ತು ದುರಸ್ತಿಯಲ್ಲಿ ಇರುವ ಪಿಒಎಸ್ ಯಂತ್ರಗಳನ್ನು ಕೂಡಲೇ ಸರಿಪಡಿಸಿ ಮಾರಾಟಗಾರರಿಗೆ ಒದಗಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಸಗೊಬ್ಬರ ಸರಬರಾಜು ಸಂಸ್ಥೆಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ರಸಗೊಬ್ಬರ ಸರಬರಾಜು ಸಮರ್ಪಕವಾಗಿದ್ದು ಯಾವುದೇ ರೀತಿಯ ಕೊರತೆ ಇಲ್ಲ, ಜಿಲ್ಲೆಗೆ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಇಲ್ಲಿವರೆಗೆ 56,717 ಮೆ.ಟನ್ ಯೂರಿಯಾ ಸರಬರಾಜಾಗಿದೆ ಹಾಗೂ ಸುಮಾರು 6200 ಮೆ.ಟನ್ ಗೊಬ್ಬರ ಬರುವ ನೀರೀಕ್ಷೆಯಿದೆ ಎಂದರು.

ರಸಗೊಬ್ಬರದ ದಾಸ್ತಾನಿನ ಆಗಮನದ ಹಾಗೂ ಡೀಲರ್‍ಗಳಿಗೆ ವಿತರಣೆಯಾಗುತ್ತಿರುವ ಬಗ್ಗೆ ಮುಂಚಿತವಾಗಿ ಇಲಾಖೆಗೆ ಮಾಹಿತಿಯನ್ನು ಸಂಸ್ಥೆಗಳು ನೀಡಬೇಕು ಎಂದು ಸೂಚಿಸಿದರು.

2020-21ನೇ ಸಾಲಿನ ರಸಗೊಬ್ಬರ ಸರಬರಾಜು ಯೋಜನೆಯ ಪ್ರಕಾರ ಏಪ್ರಿಲ್-2020 ರಿಂದ ಇಲ್ಲಿವರೆಗೆ ಜಿಲ್ಲೆಗೆ ಸರಬರಾಜು ಹಾಗೂ ವಿತರಣೆಯಾದ ವಿವಿದ ರಸಗೊಬ್ಬರಗಳ ವಿವರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ತಿಂಗಳ ಅಂತ್ಯದವರೆಗೆ ಜಿಲ್ಲೆಗೆ ಸರಬರಾಜು ಆಗುವ ರಸಗೊಬ್ಬರಗಳ ವಿವರವನ್ನು ಸಹ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಪಡೆದುಕೊಂಡರು.

ಈ ಸಭೆಯಲ್ಲಿ  ಸಹಾಯಕ ಕೃಷಿ ನಿರ್ದೇಶಕರಾದ ಸೈಯದ್ ಮುಜಿಬುರ್ ರೆಹಮಾನ್, ಕೆ.ನಾಗರಾಜ್, ಕೃಷಿ ಅಧಿಕಾರಿ ರಾಜ ಜಿ.ಎ., ಹಾಗೂ ಕೋರಮಂಡಲ್ ಇಂಟರ್‍ನ್ಯಾಷನಲ್ ಲಿ, ಮದ್ರಾಸ್ ಫರ್ಟಿಲೈಜರ್ಸ್ ಲಿ., ಮಂಗಳೂರು ಕೆಮಿಕಲ್ಸ್ ಲಿ., ರಾಷ್ಟ್ರೀಯ ಕೆಮಿಕಲ್ಸ್ ಲಿ., ಇಫ್ಕೊ ಲಿ., ಇಂಡಿಯನ್ ಪೊಟಾಷ್ ಲಿ., ನಾಗಾರ್ಜುನ ಫರ್ಟಿಲೈಜರ್ಸ್ ಲಿ., ದೀಪಕ್ ಫರ್ಟಿಲೈಜರ್ಸ್ ಲಿ., ಪ್ಯಾಕ್ಟ್ ಲೀ. ಕರ್ನಾಟಕ ರಾಜ್ಯ ಸಹಕಾರ ಒಕ್ಕೂಟ ಪ್ರತಿನಿಧಿಗಳು ಮತ್ತು ಇನ್ನಿತರೆ ಸಂಸ್ಥೆಯ ವ್ಯವಸ್ಥಾಪಕರು ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss