ಬಳ್ಳಾರಿ: ನರಿಯೊಂದು ಕುರಿಗಾಹಿಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಗ್ರಾಮದ ಯಮನಪ್ಪ ಗಾಯಗೊಂಡವರು. ಎಂದಿನಂತೆ ಕುರಿಗಾಹಿ ಯಮನಪ್ಪ ಅವರು ಬೆಳಗಿನ ಜಾವ ಕುರಿ ಹಟ್ಟಿಗೆ ತೆರಳುವಾಗ ಪೊದೆಯಲ್ಲಿ ಅಡಗಿದ್ದ ನರಿ ಇದ್ದಕ್ಕಿದ್ದಂತೆ ಕುರಿಗಾಹಿ ಮೇಲೆ ದಾಳಿ ನಡೆಸಿದ್ದು, ಕೈಯನ್ನು ಕಚ್ಚಿ ಗಾಯಗೊಳಿಸಿದೆ. ತಪ್ಪಿಸಿಕೊಳ್ಳಲು ಮುಂದಾದಾಗ ಮತ್ತೊಮ್ಮೆ ದಾಳಿ ನಡೆಸಿದೆ. ರೊಚ್ಚಿಗೆದ್ದ ಯಮನಪ್ಪ ನರಿಯನ್ನು ಹೊಡೆದು ಸಾಯಿಸಿದ್ದಾನೆ ಎಂದು ಸಂಬಂಧಿಕರೋಬ್ಬರು ತಿಳಿಸಿದ್ದಾರೆ. ದಾಳಿ ಹಿನ್ನೆಲೆ ಯಮನಪ್ಪ ಅವರ
ಕೈ ಬೆರಳು, ಮುಂಗೈಗೆ ಗಂಭೀರ ಗಾಯಗಳಾಗಿದ್ದು, ಸಮಿಪದ ಉಜ್ಜಿನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ದಾಳಿ ನಡೆದ ಕುರಿತು ಕುರಿಗಾಹಿ ಯಮನಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ, ಈ ಭಾಗದಲ್ಲಿ ನರಿಗಳ ಹಾವಳಿ ಹೆಚ್ಚಿದ್ದು, ಜನರಲ್ಲಿ ಭಯ ಸೃಷ್ಟಿಸಿದೆ. ಕೂಡಲೇ ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.