ಹೊಸ ದಿಗಂತ ವರದಿ, ಬಳ್ಳಾರಿ:
ಹಳ್ಳಿ ಅಖಾಡ ಗ್ರಾ.ಪಂ.ಚುನಾವಣೆ ಮತ ಎಣಿಕೆ ಕಾರ್ಯ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಬುಧವಾರ ಶಾಂತಿಯುವಾಗಿ ನಡೆಯಿತು. ಜಿಲ್ಲೆಯ 229 ಗ್ರಾ.ಪಂ.ಗಳ 3612 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಜರುಗಿದ್ದ ಚುನಾವಣೆಯ ಮತ ಎಣಿಕೆಯ ಬಳ್ಳಾರಿ ನಗರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅತ್ಯಂತ ಸುಸೂತ್ರವಾಗಿ ಬುಧವಾರ ಜರುಗಿತು.
ಬಳ್ಳಾರಿ ತಾಲೂಕಿನಲ್ಲಿರುವ 25 ಗ್ರಾಪಂಗಳ 449 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯು ನಗರದ ಸಂತ್ಜಾನ್ ಪ್ರೌಢಶಾಲೆಯಲ್ಲಿ ಬೆಳಗ್ಗೆ 8ಕ್ಕೆ ಆರಂಭವಾಯಿತು. ಅದಕ್ಕೂ ಮುಂಚೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ರೂಂಗಳನ್ನು ಒಪನ್ ಮಾಡಲಾಯಿತು. ನಂತರ ಮತ ಎಣಿಕೆ ಆರಂಭವಾಯಿತು.
ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನಿಯೋಜಿತರಾಗಿರುವ ವೀಕ್ಷಕ ಕೆ.ಎಂ.ಸುರೇಶಕುಮಾರ್,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ ಮತ್ತಿತರರು ಮತ ಎಣಿಕೆ ನಡೆಯುತ್ತಿರುವ ಎಲ್ಲ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿಸಿ ನಕುಲ್ ಅವರು ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಈ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಗೆ ನೀಡಿದರು. ನಂತರ ಅವರು ಸಂಡೂರು,ಕುರುಗೋಡು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಪ್ರಕ್ರಿಯೆಗಳನ್ನು ವೀಕ್ಷಿಸಲು ತೆರಳಿದರು.
ಜಿಲ್ಲೆಯಲ್ಲಿ 115 ಕೊಠಡಿಗಳಲ್ಲಿ ಮತಎಣಿಕೆ ನಡೆಯಿತು. 473 ಟೇಬಲ್ಗಳನ್ನು ಎಣಿಕೆಗೆ ಬಳಸಲಾಗಿತ್ತು. ಮತ ಎಣಿಕೆ ಕಾರ್ಯಕ್ಕೆ 1550 ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಸಂಜೆ 7ರವರೆಗೆ ಪೂರ್ಣಪ್ರಮಾಣದಲ್ಲಿ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.
ಪ್ರತಿ ತಾಲೂಕಿನ ಉಸ್ತುವಾರಿಗಾಗಿ ಒಬ್ಬ ಡಿ.ಎಸ್.ಪಿ ರವರನ್ನು ನೇಮಿಸಿದ್ದು, ಪ್ರತಿ ಮತ ಎಣಿಕೆ ಕೇಂದ್ರದ ಹತ್ತಿರ ಸಿ.ಪಿ.ಐ., ಪಿ.ಎಸ್.ಐ, ಹಾಗೂ ಇತರೆ ಸಿಬ್ಬಂದಿಯವರು ಮತ್ತು ಒಂದು ಕೆ.ಎಸ್.ಆರ್.ಪಿ, ಒಂದು ಡಿ.ಎ.ಆರ್. ಪಾರ್ಟಿಗಳನ್ನು ಸೂಕ್ತ ಬಂದೋಬಸ್ತಗಾಗಿ ನಿಯೋಜಿಸಲಾಗಿತ್ತು.
ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ಅಂತರದಲ್ಲಿ ಕಲಂ 144 ಸಿಎಲ್ಒಸಿ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಭ್ಯರ್ಥಿ ಅಥವಾ ಮತ ಎಣಿಕೆ ಏಜಂಟರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು