Wednesday, August 10, 2022

Latest Posts

ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರ ಮುತುವರ್ಜಿ:ಸುರಕ್ಷಿತವಾಗಿ ಮರಳಿ ಗೂಡು ಸೇರಿದ ವೆಂಕಟೇಶ್!

ಬಳ್ಳಾರಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕಳೆದ 4 ವರ್ಷಗಳ ಹಿಂದೆ ಟ್ರಕ್ ಏರಿ ಪಶ್ಚಿಮ ಬಂಗಾಳದ ತಲುಪಿ, ಬಿದಿ ಬಿದಿ ಹುಚ್ಚನಂತೆ ಅಲೆದಾಡುತ್ತಿದ್ದವನನ್ನು ಅತ್ಯಂತ ಸುರಕ್ಷಿತವಾಗಿ ಮರಳಿಗೂಡಿಗೆ ಸೇರಿಸಿದ ಕೀರ್ತಿಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಭಾಜನರಾಗಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಾಳಜಿ, ಶ್ರಮಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಣೆಯಾದ ವ್ಯಕ್ತಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪುರ ಗ್ರಾಮದ ವೆಂಕಟೇಶ ತಂದೆ ತಿಮ್ಮಪ್ಪ ಎನ್ನುವ (25) ವರ್ಷದ ಮಾನಸಿಕ ಅಸ್ವಸ್ಥಗೊಂಡ ಯುವಕ ಮರಳಿ ಗೂಡಿಗೆ ಸೇರಿದ್ದಾನೆ. ಕಳೆದ 4 ವರ್ಷಗಳ ಹಿಂದೆ ಟ್ರಕ್‍ ಮೂಲಕ ಸಂಡೂರು ನಿಂದ ಪಶ್ಚಿಮ ಬಂಗಾಳದ ರಾಜ್ಯದ ಮಾಲ್ಡಾ ನಗರ ತಲುಪಿದ್ದ. ಅಲ್ಲಿ ಬೀದಿ ಬೀದಿ ಹುಚ್ಚನ ರೀತಿಯಲ್ಲಿ ಅಲೆದಾಡಿದ್ದ, ಕೈ ಕಾಲುಗಳಿಗೆಲ್ಲ ಗಾಯ, ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ. ಎಲ್ಲಿದ್ದೇನೆ ಎನ್ನುವ ಅರಿವು ಕೂಡಾ ಅವನಿಗಿರದೇ ನಿತ್ಯ ನಿರಂತರ ಅಲೆದಾಡುತ್ತಿದ್ದ.
ಹುಚ್ಚನಂತೆ ಬೀದಿಬೀದಿ ಅಲೆದಾಡುತ್ತಿದ್ದ ವೆಂಕಟೇಶ ನನ್ನು ಗಮನಿಸಿದ ಅಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದು ಅವರನ್ನು ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಿ ವಿಶೇಷ ಆರೈಕೆ ಮಾಡುತ್ತಿದ್ದರು. ಇದನ್ನು ಅಲ್ಲಿನ ಸ್ಥಳೀಯ ಮಾಲ್ಡಾ ಜಿಲ್ಲಾಧಿಕಾರಿಗಳಿಗೆ ಎನ್‍ಜಿಒ ಪ್ರಮುಖರು ಮಾಹಿತಿ ರವಾನಿಸಿದ್ದರು. ಮಾಲ್ಡಾ ಜಿಲ್ಲಾಧಿಕಾರಿಗಳು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ವಿಷಯ ಮುಟ್ಟಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಮಾಲ್ಡಾ ಡಿಸಿ ಅವರ ಮೂಲಕ ಎನ್‍ಜಿಒ ಸಂಪರ್ಕಿಸಿ ವೆಂಕಟೇಶನಿಗೆ ಇನ್ನೀ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು ಮತ್ತು ಅದಕ್ಕೆ ಬೇಕಾಗುವ ಖರ್ಚು-ವೆಚ್ಚವನ್ನು ಕೂಡ ಭರಿಸಿದರು. ವೆಂಕಟೇಶನ ಆರೋಗ್ಯ ನಿಧಾನವಾಗಿ ಸುಧಾರಿಸಿತು. ನಂತರ ವೆಂಕಟೇಶನಿಗೆ ಮಾಲ್ಡಾ ಜಿಲ್ಲಾಡಳಿತ ಹಾಗೂ ಎನ್‍ಜಿಒ ಸಹಕಾರದೊಂದಿಗೆ ಮಾಲ್ಡಾದಿಂದ ಕಲ್ಕತ್ತಾ ವಿಮಾನ ನಿಲ್ದಾಣಕ್ಕೆ ಕರೆ ತಂದು ಬಳ್ಳಾರಿ ಜಿಲ್ಲಾಡಳಿತದ ವೆಚ್ಚದಡಿ ಕಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಗುರುವಾರ ಕರೆತಂದರು.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವೆಂಕಟೇಶನ ಸಹೋದರಿಬ್ಬರು ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರರಿಬ್ಬರ ಮಿಲನ ಮತ್ತು ಸಂತೋಷ, ಆನಂದಭಾಷ್ಪಕ್ಕೆ ವಿಮಾನ ನಿಲ್ದಾಣ ಸಾಕ್ಷಿಯಾಯಿತು. ಎಂದೆಂದಿಗೂ ಸಿಗಲಾರೆವು ಎಂದುಕೊಂಡವರು ಸಿಕ್ಕಖುಷಿ ಅವರದ್ದು.
ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ವಿಶೇಷ ಕಾರಿನ ವ್ಯವಸ್ಥೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರರ ಮೂಲಕ ವೆಂಕಟೇಶನನ್ನು ಸಂಡೂರು ತಾಲೂಕಿನ ನಾಗಲಾಪುರಕ್ಕೆ ಕರೆತಂದರು.
ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾಡಳಿತದ ಕಾರ್ಯಕ್ಕೆ ವೆಂಕಟೇಶನ ಕುಟುಂಬ ಹಾಗೂ ಇಡೀ ಜಿಲ್ಲೆಯಲ್ಲೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss