ಬಳ್ಳಾರಿ: ಕುರುಬರ ಸಂಘದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು ಬೂಡಾ ಅಧ್ಯಕ್ಷ ದಮ್ಮೂರ್ ಶೇಖರ್ ಅವರ ನೇತೃತ್ವದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ರಾಯಚೂರು ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರ್ ಶೇಖರ್ ಅವರು ಮಾತನಾಡಿ, ಬಳ್ಳಾರಿ ಜಿಲ್ಲಾ ಕುರುಬರ ಸಂಘದಿಂದ ನಗರದಲ್ಲಿ ಸಮುದಾಯ ಭವನವನ್ನು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ಇನ್ನೂ ಉಳಿದ 3 ಕೋಟಿ ರೂ.ಗಳನ್ನು ಭವನ ನಿರ್ಮಾಣ ಕಾರ್ಯಕ್ಕೆ ಮಂಜೂರು ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ, ನಗರದಲ್ಲಿ ಸುಸಜ್ಜಿತ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು. ನಮ್ಮ ಮನವಿ ಸ್ವೀಕರಿಸಿದ ಸಚಿವರು ಅನುದಾನ ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚೆರ್ಚಿಸಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎರ್ರಿಗೌಡ, ಪ್ರಧಾನ ಕಾರ್ಯದರ್ಶಿ ಎಂ.ಮಲ್ಲೇಶಪ್ಪ, ಖಜಾಂಚಿ ಕೆ.ಮೋಹನ್, ಸಂಘದ ನಿರ್ಧೇಶಕರಾದ ಕೆ.ಆರ್.ಮಲ್ಲೇಶ ಕುಮಾರ್, ಕೆ.ಆರ್.ಸುರೇಂದ್ರ, ಮುಖಂಡರಾದ ಬೆಣಕಲ್ ಬಸವರಾಜ್ ಗೌಡ, ಹೊನ್ನೂರ್ ಸ್ವಾಮೀ, ಕೆ. ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.