Friday, July 1, 2022

Latest Posts

ಬಳ್ಳಾರಿ| ಜಿಲ್ಲಾ ಖನಿಜ ನಿಧಿಯಿಂದ ವಿಕಲಚೇತನರಿಗೆ 88 ತ್ರಿಚಕ್ರ ವಾಹನ ವಿತರಣೆ

ಹೊಸ ದಿಗಂತ ವರದಿ ಬಳ್ಳಾರಿ

ಹೊಸಪೇಟೆ ನಗರ ಹಾಗೂ ಗ್ರಾಮೀಣ ಭಾಗದ ಫಲಾನುಭವಿ ವಿಕಲಚೇತನರಿಗೆ ಜಿಲ್ಲಾ ಖನಿಜ ನಿಧಿಯಿಂದ ಮಂಜೂರಾದ 88 ತ್ರಿಚಕ್ರ ಮೋಟಾರು ವಾಹನಗಳನ್ನು ಹೊಸಪೇಟೆ ನಗರದ ಮುನ್ಸಿಪಲ್‌ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ 4ನೇ ಕ್ರಿಯಾ ಯೋಜನೆ ಅನುದಾನದಡಿ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ 324 ಫಲಾನುಭವಿಗಳನ್ನು ಆಯ್ಕೆಮಾಡಲಾಗಿದೆ. ಹೊಸಪೇಟೆ ನಗರ ಹಾಗೂ ಗ್ರಾಮೀಣ ಭಾಗದ 88 ಫಲಾನುಭವಿಗಳಿಗೆ ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್ ಅವರು ತ್ರಿಚಕ್ರವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.

ತ್ರಿಚಕ್ರ ವಾಹನ ಫಲಾನುಭವಿಗಳಿಗೆ ಒದಗಿಸುವ ಕುರಿತು ಕಳೆದ 6 ತಿಂಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಾ ಕಾರ್ಯರೂಪಕ್ಕೆ ತರುವಲ್ಲಿ ಇಂದು ಯಶಸ್ವಿಯಾಗಿದ್ದೇವೆ. 100 ಕೊಡಬೇಕಿತ್ತು ತಾಂತ್ರಿಕ ಕಾರಣದಿಂದ ತಡೆಹಿಡಿದಿದ್ದು ಕೆಲ ದಿನಗಳ ನಂತರ ಉಳಿದ ಫಲಾನುಭವಿಗಳಿಗೆ ಲೋಪಗಳನ್ನು ಸರಿಪಡಿಸಿ ನೀಡಲಾಗುತ್ತದೆ. ವಾಹನಗಳನ್ನು ಪಡೆದ ಫಲಾನುಭವಿಗಳು ಯಾರು ಸಹ ಯಾವುದೇ ಕಾರಣಕ್ಕೆ ಮಾರಬಾರದು. ಸ್ವಬಳಕೆಗೆ ಮಾತ್ರ ಉಪಯೋಗ ಮಾಡಿಕೊಳ್ಳಬೇಕು, ಯಾರಾದರೂ ಮಾರಿದ್ದು ಕಂಡುಬಂದಲ್ಲಿ ಇಲಾಖೆಯು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಾಹನವನ್ನು ಪಡೆದುಕೊಂಡು ಸ್ವಾಭಿಮಾನದ ಬದುಕು ನಡೆಸಬೇಕು ಎಂದು ಫಲಾನುಭವಿಗಳಿಗೆ ತಿಳಿಸಿದರು.

ಮಾಜಿ ಹುಡಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಅವರು ಮಾತನಾಡಿ, ಸಚಿವರು ನಗರ ಅಭಿವೃದ್ಧಿ ಕೆಲಸಗಳಿಗೆ ಉತ್ಸಾಹ ತೋರಿಸಿ ಕಾಮಗಾರಿಗಳನ್ನು ಮಂಜೂರು ಮಾಡಿಸುತ್ತಿದ್ದಾರೆ, ಅದೇ ರೀತಿ ಅಂಗವಿಕಲರು ತಮ್ಮ ದಿನನಿತ್ಯದ ಜೀವನ ನಡೆಸುವ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಾಹನವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನೀಡಲಾಗಿದೆ. ಸದ್ಯ 88 ಫಲಾನುಭವಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳನ್ನು ಗುರುತಿಸಿ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.
ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿದ ಧರ್ಮೇಂದ್ರ ಸಿಂಗ್ ಅವರು ಫಲಾನುಭವಿಯೊಂದಿಗೆ ಮೊದಲ ಒಡಾಟ ನಡೆಸಿದರು.

ಈ ಸಂದರ್ಭದಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿ ಮಹಾಂತೇಶ,ತಾಪಂ ಸಹಾಯಕ ನಿರ್ದೇಶಕ ಉಮೇಶ್, ಸಿಡಿಪಿಓ ಸಿಂಧೂ ಯಲಿಗಾರ್ ,ನೋಡಲ್ ಅಧಿಕಾರಿ ಎರೆ ನಾಗಪ್ಪ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ತಾ.ಪಂ. ಅಧ್ಯಕ್ಷೆ ನಾಗವೇಣಿ ಬಸವರಾಜ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಫಲಾನುಭವಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss