ಬಳ್ಳಾರಿ: ಒಂದೆಜ್ಜೆ ಮುಂದೆ ಸಾಗಲು ಆಯಾಸಪಡುತ್ತಿದ್ದ, ನಿಲ್ಲಲು ಆಗದೇ ಪರಿತಪಿಸುತ್ತಿದ್ದ ಕೊರೋನಾ ಸೋಂಕಿತ 99ವರ್ಷ ವೃದ್ಧರೊಬ್ಬರು ಚೇತರಿಸಿಕೊಂಡು ಅತ್ಯಂತ ನಗುಮೋಗದೊಂದಿಗೆ ಯಾರ ಸಹಾಯವೂ ಇಲ್ಲದೇ ಸ್ವತಃ ಅವರೇ ನಡೆಯುತ್ತಾ ನಗುಮೋಗದೊಂದಿಗೆ ಮನೆಗೆ ತೆರಳಿದ್ದಾರೆ.
ನಗರದ ಟ್ರಾಮಾಕೇರ್ ಸೆಂಟರ್ ನ ಕೋವಿಡ್ ಆಸ್ಪತ್ರೆಯಲ್ಲಿ ಸೆ.1ರಂದು ಕೊರೊನಾ ಬಾಧಿತರಾಗಿ ಸಿರಗುಪ್ಪ ತಾಲೂಕಿನ 99 ವರ್ಷ ವಯಸ್ಸಿನ ಅಚ್ಯುತ್ ರಾವ್ ಹಾಗೂ ಅವರ ಮಗ 67ವರ್ಷ ವಯಸ್ಸಿನ ರಂಗರಾವ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾ ಸೋಂಕಿತರಾಗಿ ತೀವ್ರ ಆಯಾಸಪಡುತ್ತಿದ್ದ ವೃದ್ಧ ಅಚ್ಯುತ್ ರಾವ್ ಕುಳಿತುಕೊಳ್ಳಲು ಆಗುತ್ತಿರಲಿಲ್ಲ ಮತ್ತು ಹಾಸಿಗೆಯಲ್ಲಿಯೇ ಮಲಗುತ್ತಿದ್ದರು;ಎದ್ದೆಳಿಸುವುದಕ್ಕೂ ಇನ್ನೊಬ್ಬರ ಸಹಾಯ ಬೇಕಿತ್ತು. ಟ್ರಾಮಾಕೇರ್ ಸೆಂಟರ್ ನ ನೋಡಲ್ ಅಧಿಕಾರಿ ಡಾ.ಹರ್ಷ ಹಾಗೂ ನುರಿತ ತಜ್ಞ ವೈದ್ಯರ ತಂಡದ ವಿಶೇಷ ನಿಗಾ ಹಾಗೂ ಮುತುವರ್ಜಿ ವಹಿಸಿ ಅವರು ನೀಡಿದ ಚಿಕಿತ್ಸೆಯ ಪರಿಣಾಮ ಅಜ್ಜನೋಬ್ಬ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ;ಇವರೊಂದಿಗೆ ಸೊಂಕು ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ 67 ವರ್ಷ ವಯಸ್ಸಿನ ಮಗನೂ ಕೂಡ ಗುಣಮುಖರಾಗಿ ತಂದೆಯೊಂದಿಗೆ ನಗುಮೊಗದಿಂದ ಮನೆಯತ್ತ ತೆರಳಿದ್ದಾರೆ.
ನೋಡಲ್ ಅಧಿಕಾರಿ ಡಾ.ಹರ್ಷ ಅವರು ಮಾತನಾಡಿ,ವೃದ್ಧ ಅಚ್ಯುತ್ ರಾವ್ ಹಾಗೂ ಅವರ ಮಗ ಏಕಕಾಲಕ್ಕೆ ಸೊಂಕಿತರಾಗಿ ಟ್ರಾಮಾಕೇರ್ ಆಸ್ಪತ್ರೆಗೆ ದಾಖಲಾಗಿದ್ದರು;ಆರಂಭದಲ್ಲಿ ಅಜ್ಜ ತೀವ್ರ ಆಯಾಸ,ಸುಸ್ತು,ನಿತ್ರಾಣದಲ್ಲಿದ್ದ,ನಿರಂತರ ಚಿಕಿತ್ಸೆ ನೀಡಿದ ಪರಿಣಾಮ ತನ್ನ ಮಗನೊಂದಿಗೆ ಇವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದರು.
ಗುಣಮುಖರಾಗಿ ಡಿಸ್ಚಾರ್ಜ್ ಆದ ವೃದ್ಧನ ಮಗ ರಂಗರಾವ್(67) ಅವರು ಮಾತನಾಡಿ, ಕೊರೊನಾ ಬಂದ ತಕ್ಷಣ ತುಂಬಾ ಹೆದರಿಕೆ ಉಂಟಾಗಿತ್ತು;ತೀವ್ರ ಆತಂಕದಿಂದಲೇ ಇಲ್ಲಿಗೆ ಬಂದು ದಾಖಲಾದೆವು.ಆಸ್ಪತ್ರೆಯಲ್ಲಿ ವೈದ್ಯರು ಚೆನ್ನಾಗಿ ನೋಡಿಕೊಂಡರು ಮತ್ತು ಆತ್ಮಸ್ಥೈರ್ಯ ತುಂಬಿದರು. ಒಳ್ಳೆಯ ಚಿಕಿತ್ಸೆ ಮತ್ತು ಅಚ್ಚುಕಟ್ಟಾದ ಊಟದ ವ್ಯವಸ್ಥೆ ಇತ್ತು, ಚಿಕಿತ್ಸೆ ನೀಡಿದ ಯಾರನ್ನೂ ಮರೆಯುವುದಿಲ್ಲ ಎಂದರು.