ಬಳ್ಳಾರಿ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಳಿಸಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಗೆ ಮನವಿಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ ನಗರವನ್ನು ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಂಸದ ವೈ.ದೇವೇಂದ್ರಪ್ಪ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಇತ್ತೀಚೆಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಬಳ್ಳಾರಿ ಹಾಗೂ ಕಲಬುರ್ಗಿ ಮಾತ್ರ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ನಗರಪಾಲಿಕೆಗಳಾಗಿವೆ. ಅತ್ಯಂತ ಹಳೆಯ ನಗರವಾಗಿರುವ ಬಳ್ಳಾರಿ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿದೆ. ರಾಜ್ಯದ ಎರಡು ಜಿಲ್ಲೆಗಳು ಹಾಗೂ ಆಂದ್ರ ಪ್ರದೇಶ ರಾಜ್ಯದ ಮೂರು ಜಿಲ್ಲೆಗಳ ಮಧ್ಯೆ ಬಳ್ಳಾರಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬಳ್ಳಾರಿಯನ್ನು ಸೇರ್ಪಡೆಗೊಳಿಸುವುದರಿಂದ ನಗರದ ಮೂಲಭೂತ ಸೌಕರ್ಯಗಳು ಹೆಚ್ಚಾಗಲಿವೆ. ಇದರ ಜೊತೆಗೆ ಈ ಭಾಗದಲ್ಲಿ ಆರ್ಥಿಕತೆಗೆ ಪುಷ್ಠಿಯನ್ನು ನೀಡಿಸಂತಾಗಲಿದೆ. ಈ ಮನವಿ ಪತ್ರದ ಜೊತೆಗೆ ಬಳ್ಳಾರಿ ನಗರದ ಬಗ್ಗೆ ಸಣ್ಣ ಪುಸ್ತಕವನ್ನು ನೀಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿಕೊಳ್ಳುವುದರಿಂದ ಈ ಭಾಗದ ಭೌಗೋಳಿಕ ಹಾಗೂ ಜನಸಂಪನ್ಮೂಲದ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.