ಹೊಸ ದಿಗಂತ ವರದಿ, ಬಳ್ಳಾರಿ:
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ರಾಘವ ಕಲಾಮಂದಿರದಲ್ಲಿ ಪ್ರಾಧಿಕಾರದಲ್ಲಿ ಲಭ್ಯವಿರುವ 49 ವಾಸಯೋಗ್ಯ ಮತ್ತು ವಾಣಿಜ್ಯ ನಿವೇಶನಗಳ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ 3 ಖಾಲಿ ಜಾಗದ ಬಹಿರಂಗ ಹರಾಜು ಪ್ರಕ್ರಿಯೆಗೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸೋಮವಾರ ಚಾಲನೆ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಘವ ಕಲಾಮಂದಿರದಲ್ಲಿ ನಡೆದ ವಾಸಯೋಗ್ಯ ನಿವೇಶನ, ವಾಣಿಜ್ಯ ನಿವೇಶನ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣದಲ್ಲಿನ ಖಾಲಿ ಜಾಗಗಳ ಬಹಿರಂಗ ಹರಾಜಿನಲ್ಲಿ ಪ್ರಾಧಿಕಾರಕ್ಕೆ ಒಟ್ಟು 9.67 ಕೋಟಿ ರೂಪಾಯಿ ಆದಾಯ ಬಂದಿರುತ್ತದೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತ ವೀರೇಂದ್ರ ಕುಂದಗೋಳ, ಸಹಾಯಕ ಕಾರ್ಯಪಾಲಕ ಅಭಿಯಂತರ ರವಿಶಂಕರ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಇದ್ದರು.
ನಗರದ ಹಲವಡೆಯಿಂದ ಬಂದಿದ್ದ ನೂರಕ್ಕೂ ಹೆಚ್ಚು ಜನರು ತಲಾ 25 ಸಾವಿರ ಮುಂಗಡ ಹಣ ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಕೋವಿಡ್ ನಿಯಮಗಳನ್ನು ಪಾಲಿಸಿ ಹರಾಜು ಪ್ರಕ್ರಿಯೆ ನೆರವೇರಿಸಲಾಯಿತು..