ಬಳ್ಳಾರಿ: ಪ್ರಧಾನ ಮಂತ್ರಿ ಸ್ವಸ್ಥ್ಯ ಸುರಕ್ಷಾ ಯೋಜನೆಯಡಿ ರೂ.150 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಲಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಟ್ರಾಮಾ ಕೇರ್ (ತುರ್ತು ಚಿಕಿತ್ಸಾ ಘಟಕ)ನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸಚಿವ ಡಾ.ಹರ್ಷವರ್ಧನ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸಚಿವ ಡಾ.ಹರ್ಷವರ್ಧನ್ ಅವರು ನವದೆಹಲಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ವರ್ಚುವಲ್ ತಂತ್ರಜ್ಞಾನದ ಮೂಲಕ ಸೋಮವಾರ ಲೋಕಾರ್ಪಣೆ ಮಾಡಿದರು. ಈ ಸೂಪರ್ ಸ್ಪೇಷಾಲಿಟಿ ಟ್ರಾಮಾಕೇರ್ ಬ್ಲಾಕ್ ಇನ್ಮುಂದೆ ಕಾರ್ಯಾಚರಣೆ ಮಾಡುವುದರಿಂದ ಉತ್ತರ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತುರ್ತು ಚಿಕಿತ್ಸೆಗಾಗಿ ಬರುವಂತಹ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಮತ್ತು ಇತರೆ ಸ್ಥಳಗಳಿಗೆ ಕಳುಹಿಸುವುದು ಇನ್ಮುಂದೆ ತಪ್ಪಲಿದೆ.
ಟ್ರಾಮಾ ಕೇರ್ ಸೆಂಟರ್ ಕಟ್ಟಡವು 49 ಸಾಮಾನ್ಯ ಹಾಸಿಗೆ, 72 ಐಸಿಯು ಹಾಸಿಗೆ ಮತ್ತು ತುರ್ತು ಚಿಕಿತ್ಸ ಘಟಕದಲ್ಲಿ 79 ಹಾಸಿಗೆಗಳು ಸೇರಿದಂತೆ ಒಟ್ಟಾರೆ 200 ಹಾಸಿಗೆಗಳ ಸಾಮಥ್ರ್ಯವನ್ನು ಹೊಂದಿದೆ. ಇದರ ಜೊತೆಗೆ ನ್ಯೂರೋ ಸರ್ಜರಿ ವಿಭಾಗ,ಪ್ಲಾಸ್ಟಿಕ್ ಸರ್ಜರಿ ವಿಭಾಗ, ಆರ್ಥೋಪಿಡಿಕ್ಸ್ ವಿಭಾಗ,ರೇಡಿಯೋಲಜಿ ವಿಭಾಗ,ಅನಸ್ಥೇಷಿಯ ವಿಭಾಗಗಳನ್ನು ಹೊಂದಿದೆ.
ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ ಅವರು, ದೇಶದಲ್ಲಿ ಭಾರತ ಸ್ವಾತಂತ್ರ್ಯ ಬಂದು 50ವರ್ಷ ಕಳೆದರೂ ದೆಹಲಿಯ ಏಮ್ಸ್ ಮಾದರಿ ಆಸ್ಪತ್ರೆ ಒಂದೇ ಇತ್ತು; ಆದರೆ ಬಿಜೆಪಿ ನೇತೃತ್ವದಲ್ಲಿ ದೇಶದಲ್ಲಿ ಆಡಳಿತ ಬಂದ ಮೇಲೆ ಏಮ್ಸ್ ಮಾದರಿ 6 ಆಸ್ಪತ್ರೆಗಳನ್ನು ದೇಶದ ವಿವಿಧೆಡೆ ಆರಂಭಿಸಲಾಗಿದೆ. ಈಗ ಮತ್ತೊಂದು ಏಮ್ಸ್ ಮಾದರಿ ಆಸ್ಪತ್ರೆಯನ್ನು ಕರ್ನಾಟಕದಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಈ ಯೋಜನೆ ಹಣಕಾಸು ಇಲಾಖೆ ಮುಂದಿದ್ದು,ಶೀಘ್ರದಲ್ಲಿ ಅನುಮತಿ ದೊರೆಯಲಿದೆ ಎಂದರು.
ಆರೋಗ್ಯವೇ ಭಾಗ್ಯ;ಆರೋಗ್ಯವಿದ್ದರೇನೆ ಮನುಷ್ಯನಿಗೆ ಎಲ್ಲ ಎಂಬುದನ್ನು ಅರಿತ ದಿಂ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು
2003ರಲ್ಲಿ ಏಮ್ಸ್ ಮಾದರಿ ಆಸ್ಪತ್ರೆಗಳನ್ನು ದೇಶದಲ್ಲಿ ಹಲವೆಡೆ ಆರಂಭಿಸಲು ನಿರ್ಧರಿಸಿದರು. ಅವರಿಂದಾಗಿ ಕಳೆದ ವರ್ಷದ ರಾಯಬರೇಲಿ ಏಮ್ಸ್ ಆಸ್ಪತ್ರೆ ಸೇರಿದಂತೆ 7 ಕಡೆ ನಿರ್ಮಿಸಲಾಗಿದೆ. ಈಗ ಕರ್ನಾಟಕಕ್ಕೂ ಒಂದು ಮಂಜೂರಾಗಲಿದೆ ಎಂದು ವಿವರಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಆಶಯದಂತೆ ದೇಶದಲ್ಲಿ 22 ಏಮ್ಸ್ ಆಸ್ಪತ್ರೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಈ ವರ್ಷ ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಆರಂಭಿಸಲು ಉದ್ದೇಶಿಸಲಾಗಿದೆ. ಬಳ್ಳಾರಿ ಯಿಂದ .ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿ ಸತತ ಸಂಪರ್ಕದ ಮೂಲಕ ಇಲ್ಲಿ ಟ್ರಾಮ್ ಕೇರ್ ಸೆಂಟರ್ ಆರಂಭಕ್ಕೆ ಅವರು ಆರೋಗ್ಯ ಸಚಿವರಾಗಿದ್ದಾಗ ಮಂಜೂರಾತಿ ನೀಡಿದ್ದರು. ಈಗ ಅದು ಕೈಗೂಡಿದೆ ಎಂದರು.
ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ 57 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಮೂಲಕ ಆಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ನೀಗಿಸುವ ಪ್ರಯತ್ನ ನಡೆದಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕು ನಿವಾರಣೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಶ್ರಮಿಸುತ್ತಿದೆ ಎಂದರು.
ಟ್ರಾಮ್ ಕೇರ್ ಸೆಂಟರ್ ಜೊತೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆರಂಭಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿ, ಈ ಆಸ್ಪತ್ರೆಯು ನೆರೆಯ ರಾಜ್ಯ, ಉತ್ತರಕರ್ನಾಟಕದ ಜಿಲ್ಲೆಗಳ ಜನರಿಗೂ ಸಹಕಾರಿಯಾಗಲಿದೆ. ಕಳೆದ ಒಂದು ದಶಕದಿಂದ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಮುಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಏಮ್ಸ್ ಮಾದರಿಯಲ್ಲಿ ಅಬಿವೃದ್ಧಿಪಡಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವೀನಿಕುಮಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸದ ನಾಸೀರ್ಹುಸೇನ್, ಶಾಸಕ ಜಿ.ಸೋಮಶೇಖರ ರೆಡ್ವಿ, ವಿಧಾನ ಪರಿಷತ್ ಸದಸ್ಯ ಅಲ್ಲಂವೀರಭದ್ರಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಸುನೀಲ್ ಶರ್ಮಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಟಿ.ಕೆ.ಅನಿಲಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ಆರ್.ನಂದಿನಿ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ ಸೇರಿದಂತೆ ಇತರರು ಇದ್ದರು.