ಹೊಸ ದಿಗಂತ ವರದಿ, ಬೀದರ್:
ವಿಶ್ವದ ಮೊದಲ ಸಂಸತ್ತು ಖ್ಯಾತಿಯ ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ಭಾನುವಾರ ಭೇಟಿ ನೀಡಿ, ಅಲ್ಲಿನ ಅನುಭವ ಮಂಟಪದ ದರುಶನ ಪಡೆದರು.
ಈ ವೇಳೆ ಮಾತನಾಡಿದ ಅವರು, ಜಗಜ್ಯೋತಿ ಬಸವೇಶ್ವರರು ಸೇರಿದಂತೆ ಎಲ್ಲ ಮಹಾನ್ ಶರಣರು ಒಂದೆಡೆ ಸೇರಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪವನ್ನು ಜಗತ್ತಿನ ಮೊದಲು ಸಂಸತ್ತು ಎಂದು ಬಣ್ಣಿಸಲಾಗಿದೆ.
ಹಳೆಯ ಅನುಭವ ಮಂಟಪದ ಸಂಸ್ಮರಣೆ ಹಿನ್ನೆಲೆಯಲ್ಲಿ ವಿನೂತನ ಅನುಭವ ಮಂಟಪದ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ
ಗಳಾದ ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ಚಾಲನೆ ನೀಡಿದ್ದಾರೆ. ಈ ಮೂಲಕ ನಾಡಿನ ಅಸಂಖ್ಯೆ ಬಸವ ಅನುಯಾಯಿಗಳ ಮಹತ್ವದ ಆಶಯ, ಕನಸು ಸಾಕಾರವಾದಂತಾಗಿದೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ, ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಬಸವಲಿಂಗ
ಪಟ್ಟದೇವರು ಅವರು ಉಪ ಮುಖ್ಯಮಂತ್ರಿ ಅವರಿಗೆ ಸನ್ಮಾನಿಸಿದರು. ಇದೆ ವೇಳೆ ಉಪ ಮುಖ್ಯಮಂತ್ರಿ ಅವರು ಷಟಸ್ಥಲ ದರ್ಶನ
ಎಂಬ ಕೃತಿಯನ್ನು ಕೂಡ ಬಿಡುಗಡೆ ಮಾಡಿದರು.
ಸಂಸದರಾದ ಭಗವಂತ ಖೂಬಾ, ಜಿ.ಪಂ. ಅಧ್ಯಕ್ಷ ನಿರ್ಮಲಾ ಮಾನೆಗೋಪಾಳೆ, ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ
ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಗುಂಡು ರೆಡ್ಡಿ, ಮುಖಂಡರಾದ ಸುಭಾಷ್ ಕಲ್ಲೂರ, ಗುರುನಾಥ ಕೊಳ್ಳುರ, ಮತ್ತು ಬಸವಕಲ್ಯಾಣನ ಸಹಾಯಕ ಆಯುಕ್ತರಾದ ಭುವನೇಶ ಪಟೇಲ್ ಹಾಗೂ ತಹಶೀಲ್ದಾರರದ ಸಾವಿತ್ರಿ ಸಲಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.