ಬೆಂಗಳೂರು: ಐಎಂಎ ಬಹುಕೋಟಿ ಹಗರಣದ ತ್ವರಿತ ವಿಲೇವಾರಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗಾಗಿ ಹೈಕೋರ್ಟ್ ಗೆ ಮನವಿ ಮಾಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ಸಾರ್ವಜನಿಕ ಮಹತ್ತ್ವದ ಜರೂರು ವಿಷಯಗಳ ಬಗ್ಗೆ ಅಲ್ಪಕಾಲಾವಧಿ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್, ಲಕ್ಷಾಂತರ ಜನರು ಸಾವಿರಾರು ಕೋಟಿ ರೂ.ಗಳನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದು, ಮಾಜಿ ಸಚಿವರೊಬ್ಬರು ಈ ಸಂಸ್ಥೆಗೆ ಹೆಚ್ಚು ಪ್ರಚಾರ ಕೊಟ್ಟಿದ್ದರಿಂದಲೇ ನಂಬಿಕೆ ಮೇಲೆ ಹೂಡಿಕೆಗಳಾಗಿವೆ. ಆದರೀಗ ಬಹುಕೋಟಿ ವಂಚನೆ ನಡೆದಿದ್ದು, ಬಡವರ ಹಣಕ್ಕೆ ಲೆಕ್ಕವಿಲ್ಲದಂತಾಗಿದೆ. 9 ತಿಂಗಳಾದರೂ ನ್ಯಾಯ ಸಿಕ್ಕಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ತ್ವರಿತ ನ್ಯಾಯ ಸಿಗುವಂತೆ ಮಾಡಬೇಕು. ಐಎಂಎ ಆಸ್ತಿಗಳನ್ನು ಜಪ್ತಿ ಮಾಡಿಕೊಂಡು ಸಂತ್ರಸ್ತರಿಗೆ ಹಣ ಮರುಪಾವತಿಸಬೇಕು. ಆದಾಯ ತೆರಿಗೆ ಇಲಾಖೆಗೆ ಸಂಸ್ಥೆಯು ಕಟ್ಟಿರುವ 123 ಕೋಟಿ ರೂ.ಗಳನ್ನೂ ವಶಪಡಿಸಿಕೊಂಡು ಸಂತ್ರಸ್ತರಿಗೆ ಹಂಚಬೇಕು ಎಂದು ಆಗ್ರಹಿಸಿದರು.
ಕಾಲಕಾಲಕ್ಕೆ ವರದಿ ಸಲ್ಲಿಕೆ: ಇದಕ್ಕೆ ಉತ್ತರಿಸಿದ ಮಾಧುಸ್ವಾಮಿ, 2019 ರಲ್ಲಿ ನಡೆದ ಈ ಪ್ರಕರಣದ ವಿಚಾರಣೆಯು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸಿಬಿಐ ಮೂಲಕವೂ ತನಿಖೆ ನಡೆಸಿ ಕಾಲಕಾಲಕ್ಕೆ ವರದಿಯನ್ನು ಕೋರ್ಟ್ ಗೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ರಚಿಸಿ, ಈವರೆಗೆ 70 ಸಾವಿರ ದೂರುಗಳನ್ನು ದಾಖಲಿಸಿಕೊಂಡಿದ್ದು, ಇನ್ನೂ ದೂರುಗಳು ಬರುತ್ತಲೇ ಇರುವುದರಿಂದ ಈ ತಿಂಗಳಾಂತ್ಯದವರೆಗೂ ಆನ್ ಲೈನ್ ಮೂಲಕ ಸಹ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಐಎಂಎಗೆ ಸಂಬಂಧಿಸಿದ 465.21 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ದೂರುಗಳ ಹರಿವು ನಿಂತ ಬಳಿಕವಷ್ಟೇ ಹೂಡಿಕೆದಾರರೆಷ್ಟು? ಹೂಡಿಕೆಯಾದ ಹಣವೆಷ್ಟು ಎಂಬುದು ಸ್ಪಷ್ಟವಾಗಲಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ಸಂಬಂಧ ಹೈಕೋರ್ಟ್ ಮುಂದೆ ಮನವಿ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು.