ಮೈಸೂರು: ಭಾರತೀಯ ಭಾಷಾ ಸಂಸ್ಥಾನದ ಮಾಜಿ ಉಪನಿರ್ದೇಶಕರಾದ ಭಾಷಾ ತಜ್ಞ ಪ್ರೊ.ಬಂಡೋ ಭೀಮಾಜಿ ಅವರು ಮೈಸೂರಿನ ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಮುಂಜಾನೆ ತೀವ್ರ ಅನಾರೋಗ್ಯದಿಂದ ನಿಧನರಾದರು. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಕಲ್ಪನಾ ಹಾಗೂ ವಂದನಾ ಎಂಬ ಇಬ್ಬರು ಪುತ್ರಿಯರಿದ್ದು, ಅಮೇರಿಕಾದಲ್ಲಿ ವಾಸವಾಗಿದ್ದಾರೆ.
೧೯೩೫ರ ಮೇ ೨೦ರಂದು ಕುಂದಗೋಳದಲ್ಲಿ ಜನಿಸಿದ ಬಂಡೋ ಭೀಮಾಜಿ ರಾಜಪುರೋಹಿತರು, ಹುಬ್ಬಳ್ಳಿಯ ಕುರ್ತುಕೋಟಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದಲ್ಲಿ ಕಾಲೇಜ್ ಶಿಕ್ಷಣವನ್ನ ಮುಗಿಸಿದರು. ಕರ್ನಾಟಕ ವಿವಿಯನ್ನು ಎಂಎ ಪದವಿ ಪಡೆದು, ಪುಣೆಯ ಡೆಕ್ಕನ್ ಕಾಲೇಜ್ನಲ್ಲಿ ಡಿಪ್ಲೋಮಾ ಇನ್ ಲಿಂಗ್ವಿಸ್ಟಿಕ್ಸ್ ಶಿಕ್ಷಣ ಪೂರೈಸಿದರು. ಕರ್ನಾಟಕ ವಿವಿಯಿಂದ ಡಾ.ಆರ್.ಸಿ.ಹಿರೇಮಠ ಮಾರ್ಗದರ್ಶನದಲ್ಲಿ ವಚನ ಸಾಹಿತ್ಯ ವ್ಯಾಕರಣ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ, ಪಿಹೆಚ್ಡಿ ಪಡೆದಿದ್ದರು.
ಕನ್ನಡ, ಹಿಂದಿ, ಮಲೆಯಾಳ, ಮರಾಠಿ, ಇಂಗ್ಲೀಷ್, ಸಂಸ್ಕೃತ ಭಾಷೆಯಲ್ಲಿ ಪರಿಣಿತಿ ಸಾಧಿಸಿದ್ದರು. ಇವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಬೇಂದ್ರೆ ಶತಮಾನೋತ್ಸವ ಗೌರವ, ಕಿಟೆಲ್ ಪಾರಿತೋಷಕ ಲಭಿಸಿತ್ತು. ವಚನ ವ್ಯಾಕರಣ, ಕನ್ನಡವೆಲ್ಲಾ ಒಂದೇ, ಬೇಂದ್ರೆ ಕಾವ್ಯ ನಿಘಂಟು, ಶೈಲಿ ವಿಜ್ಞಾನ ಮತ್ತು ಜ್ಞಾನ ಶಾಸ್ತ್ರ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಮೃತರ ಅಂತ್ಯಕ್ರಿಯೆ ಮೈಸೂರಿನ ಗೋಕುಲಂನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಯಿತು. ಕೋವಿಡ್-೧೯ರ ನಿಯಮದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳಿಗೆ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಬಂಧುಗಳೇ ಪ್ರೊ.ಬಂಡೋ ಭೀಮಾಜಿ ರಾಜಪುರೋಹಿತರ ಅಂತ್ಯಕ್ರಿಯೆ ನೆರವೇರಿಸಿದರು.