ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಾಫೆ ಮೊರ್ತಾಜ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅವರಿಗೆ ಕಳೆದ ಗುರುವಾರ ರಾತ್ರಿ ಜ್ವರ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ಮಾಡಿದ ಬಳಿಕ ಕೊರೋನಾ ಪಾಸಿಟಿವ್ ಇರುವುದು ಕಂಡುಬಂದಿದೆ.
ಕಳೆದ ಗುರುವಾರ ರಾತ್ರಿ ಜ್ವರ ಇರುವ ಬಗ್ಗೆ ಮಶ್ರಾಫೆ ಮೊರ್ತಾಜ ಅವರು ತಿಳಿಸಿದ್ದರು. ಶುಕ್ರವಾರ ಕೋವಿಡ್-೧೯ ಟೆಸ್ಟ್ಗೆ ಸ್ಯಾಂಪಲ್ ಪಡೆಯಲಾಗಿತ್ತು ಹಾಗೂ ವರದಿಯಲ್ಲಿ ಪಾಸಿಟಿವ್ ಇರುವುದು ಕಂಡು ಬಂದಿದೆ. ಆದರೂ, ಅವರು ಚೆನ್ನಾಗಿದ್ದಾರೆ ಮತ್ತು ಅವರ ಕುಟುಂಬ ಕೂಡ ಅತ್ಯುತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.
೨೦೦೦ರಿಂದಲೂ ಮಶ್ರಾಫೆ ಮೊರ್ತಾಜ ಅವರು ಬಾಂಗ್ಲಾದೇಶದ ಪರ ಆಡುತ್ತಿದ್ದಾರೆ ಹಾಗೂ ಅವರು ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಸಾರಥ್ಯ ವಹಿಸಿಕೊಳ್ಳುತ್ತಿದ್ದರು. ಬಾಂಗ್ಲಾದೇಶದ ಅತ್ಯಂತ ಯಶಸ್ವಿ ನಾಯಕರಲ್ಲಿ ಮಶ್ರಾಫೆ ಕೂಡ ಒಬ್ಬರಾಗಿದ್ದಾರೆ. ಅವರು ಕಳೆದ ೨೦೧೯ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.