ಲಕ್ನೋ: ಅಯೋಧ್ಯೆಯಲ್ಲಿನ ಬಾಬರಿ ಕಟ್ಟಡವನ್ನು ಉರುಳಿಸುವ ಯಾವುದೇ ಉದ್ದೇಶ ನಮ್ಮ ಕರಸೇವಕರಿಗಿರಲಿಲ್ಲ.ನಾವು ಸಾಂಕೇತಿಕ ಕರಸೇವೆಯ ಉದ್ದೇಶದೊಂದಿಗೆ ಡಿ.೬ರ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಇದಕ್ಕಾಗಿ ಮುನ್ನಾ ದಿನ ತಮ್ಮ ಮನೆಯಲ್ಲಿ ಆಡ್ವಾಣಿಯವರು ಸರಿದಂತೆ ಹಿಂದು ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದರು. ಆದರೆ ಬಿಜೆಪಿ ಸರಕಾರಗಳನ್ನು ಉರುಳಿಸುವ ದುರುದ್ದೇಶದಡಿ ಬಾಬರಿ ಕಟ್ಟಡ ಉರುಳಿಸಿದ್ದು ಕಾಂಗ್ರೆಸ್ ಎಂಬುದಾಗಿ ಬಜರಂಗದಳದ ಮಾಜಿ ನಾಯಕ ಹಾಗೂ ಬಿಜೆಪಿ ಸಂಸದ ವಿನಯ ಕತಿಯಾರ್ ಬಹಿರಂಗಪಡಿಸಿದ್ದಾರೆ.
೧೯೯೨ರ ಡಿ.೫ರಂದು ನನ್ನ ಮನೆಯಲ್ಲಿ ಬಾಬರಿ ಕಟ್ಟಡ ಉರುಳಿಸುವ ಯಾವುದೇ ಸಂಚು ನಡೆದಿರಲಿಲ್ಲ. ನಾವು ಕೇವಲ ಸಾಂಕೇತಿಕ ಕರಸೇವೆಯನ್ನು ಮಾತ್ರ ಯೋಜಿಸಿದ್ದೆವು.ಆಡ್ವಾಣೀಜಿಯವರು ಅಂದು ರಾತ್ರಿ ಅಯೋಧ್ಯೆ ತಲುಪಿದ್ದು, ಜಾನಕಿ ಮಹಲ್ನಲ್ಲಿ ಉಳಿದುಕೊಂಡಿದ್ದರು. ಅವರು ನನ್ನ ನಾಯಕರಾಗಿದ್ದು, ಅವರನ್ನು ನನ್ನ ಮನೆಗೆ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದೆ.ನಾವು ಮರುದಿನದ ‘ಸಾಂಕೇತಿಕ ಕರಸೇವೆ’ ಬಗ್ಗೆ ಚರ್ಚಿಸಿದ್ದೆವು.ಅಲ್ಲದೆ ಯಾವುದೇ ಕರಸೇವಕರನ್ನು ಬಾಬರಿ ಕಟ್ಟಡದ ಬಳಿಗೆ ಪ್ರವೇಶಿಸಲು ಬಿಡದಿರುವ ಬಗೆಗೂ ನಿರ್ಧರಿಸಿದ್ದೆವು.ಆದರೆ ಈ ಬಾಬರಿ ಕಟ್ಟಡ ಉರುಳಿಸಿದ್ದರ ಹಿಂದಿದ್ದುದು ಕಾಂಗ್ರೆಸ್.ಉತ್ತರಪ್ರದೇಶ ಬಿಜೆಪಿ ಸರಕಾರವನ್ನು ಉರುಳಿಸಲು ಕಾಂಗ್ರೆಸ್ ಈ ತಂತ್ರ ರೂಪಿಸಿತ್ತು.
ಬಾಬರಿ ಕಟ್ಟಡ ಉರುಳಿಸುವ ಬಗ್ಗೆ ನಾವು ಚಿಂತನೆ ನಡೆಸಿರಲಿಲ್ಲ. ನಮ್ಮ ಕರಸೇವಕರು ಶಿಸ್ತಿನ ಸಿಪಾಯಿಗಳಾಗಿದ್ದರು. ಆದರೆ ಕಾಂಗ್ರೆಸಿಗೆ ನಮ್ಮ ಬಿಜೆಪಿ ಸರಕಾರಗಳನ್ನು ಉರುಳಿಸಬೇಕಾಗಿತ್ತು. ಇದಕ್ಕಾಗಿ ಅವರು ಸಂಚು ರೂಪಿಸಿದ್ದರು. ಅಜ್ಞಾತ ಕ್ರಿಮಿನಲ್ ಶಕ್ತಿಗಳು ಅಲ್ಲಿ ಪ್ರವೇಶಿಸಿ ಪರಿಸ್ಥಿತಿಯನ್ನು ಪ್ರಚೋದಿಸಿ ಬಾಬರಿ ಕಟ್ಟಡ ಉರುಳುವಂತೆ ಮಾಡಿದರು.ಕರಸೇವಕರಿಗೆ ಸರಯೂ ನದಿಯಿಂದ ಮರಳನ್ನು ತರುವಂತೆ ಸೂಚಿಸಿ ಸಾಂಕೇತಿಕ ಕರಸೇವೆಗೆ ಮುಂದಾಗಿದ್ದ ನಮಗೆ ಪರಿಸ್ಥಿತಿ ಒಮ್ಮೆಲೇ ಹೇಗೆ ನಿಯಂತ್ರಣ ತಪ್ಪಿತು ಎಂಬುದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ.ವಾಸ್ತವವಾಗಿ ಬಾಬರಿ ಕಟ್ಟಡ ಉರುಳುವಲ್ಲಿ ಕಾಂಗ್ರೆಸ್ ಪಾತ್ರ ಕುರಿತಂತೆ ತನಿಖೆ ನಡೆಸಬೇಕೆಂದು ಕತಿಯಾರ್ ಆಗ್ರಹಿಸಿದರು. ಬಾಬರಿ ಕಟ್ಟಡ ಉರುಳಿದ್ದನ್ನೇ ನೆವವಾಗಿಸಿ ಉತ್ತರ ಪ್ರದೇಶ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿನ ಜನರಿಂದ ಚುನಾಯಿತ ಬಿಜೆಪಿ ಸರಕಾರಗಳನ್ನು ಅಂದಿನ ಕಾಂಗ್ರೆಸ್ ಸರಕಾರ ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.