Monday, August 8, 2022

Latest Posts

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ: ಸತ್ಯಕ್ಕೇ ಜಯ ಎಂದ ಡಿಸಿಎಂ ಸವದಿ

ಬೆಳಗಾವಿ: ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಇಂದು ನೀಡಿದ ತೀರ್ಪು ಐತಿಹಾಸಿಕವಾಗಿದೆ ಮತ್ತು ‘ಸತ್ಯಕ್ಕೇ ಜಯ’ ಎಂಬ ಶ್ರೀ ರಾಮನ ಧ್ಯೇಯವಾಖ್ಯಕ್ಕೆ ಪೂರಕವಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಮಾತನಾಡಿ, ಸತ್ಯ ಎಂದಿಗೂ ಸತ್ಯವೇ, ಬಿಜೆಪಿಯು ಇದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಈಗ ನ್ಯಾಯದೇವತೆಯೂ ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಹಿರಿಯ ಮುತ್ಸದ್ಧಿ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್‍ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮುಂತಾದವರನ್ನು ಈ ಪ್ರಕರಣದ ಷಡ್ಯಂತ್ರದಲ್ಲಿ ಸಿಲುಕಿಸುವ ದೊಡ್ಡ ರಾಜಕೀಯ ಹುನ್ನಾರವೇ ನಡೆದಿತ್ತು. ಆದರೆ ಈ ನ್ಯಾಯ ನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ. ಈ ಎಲ್ಲಾ ಹಿರಿಯ ಮುಖಂಡರಿಗೆ ವಿನಾಕಾರಣ ಮಾನಸಿಕ ಕಿರುಕುಳ ನೀಡುವ ಉದ್ದೇಶ ಹೊಂದಿದ್ದ ಕೆಲವು ರಾಜಕೀಯ ಶಕ್ತಿಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ತಕ್ಕ ಶಾಸ್ತಿ ಮಾಡಿದೆ ಎಂದು ಸಚುವ ಸವದಿ ಅವರು ತಿಳಿಸಿದ್ದಾರೆ.
ಪ್ರಾಮಾಣಿಕ ಸೇವೆ ಮತ್ತು ಆದರ್ಶ ನಡೆನುಡಿಗಳ ಉತ್ತಮ ಆಡಳಿತಕ್ಕೆ ನಮ್ಮಲ್ಲಿ “ರಾಮರಾಜ್ಯ” ಎಂದು ಕರೆಯುವುದು ರೂಢಿ. ಅದೇರೀತಿ ಇತ್ತೀಚೆಗೆ ರಾಮಮಂದಿರದ ನಿರ್ಮಾಣಕ್ಕೆ ಅನುಮತಿ ನೀಡಿದ ಮತ್ತು ಈಗ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ನೀಡಲಾದ ತೀರ್ಪುಗಳು “ರಾಮರಾಜ್ಯ”ದ ಪರಿಕಲ್ಪನೆಗೆ ಪೂರಕವಾಗಿಯೇ ಇದೆ ಎಂಬುದು ನನ್ನಂತಹ ಅನೇಕರ ಅನಿಸಿಕೆ ಎಂದು ಸವದಿ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಪವಿತ್ರವಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರವನ್ನು ನಿರ್ಮಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಮುಖಂಡರು, ಸಾಧುಸಂತರು, ಕರಸೇವಕರು, ಶ್ರೀ ರಾಮನ ಭಕ್ತರು ಮತ್ತು ಬಿಜೆಪಿಯ ಸಮಸ್ತರೂ ಹಲವು ವರ್ಷಗಳಿಂದ ಹೋರಾಟ, ತ್ಯಾಗ ಬಲಿದಾನಗಳನ್ನು ಕೈಗೊಂಡಿದ್ದರು. ಈ ಎಲ್ಲಾ ಹೋರಾಟಗಳಿಗೆ ಈ ತೀರ್ಪಿನಿಂದಾಗಿ ಮತ್ತೊಮ್ಮೆ ಮೌಲ್ಯ ಹೆಚ್ಚಿದಂತಾಗಿದೆ. ಅತ್ಯಂತ ಸಹನೆಯಿಂದ, ಅಧ್ಯಯನಗಳಿಂದ ಈ ವಿದ್ವತ್‍ಪೂರ್ಣ ತೀರ್ಪು ಹೊರಹೊಮ್ಮಿದೆ ಎಂದು ಹೇಳಿದ ಸಚಿವ ಲಕ್ಷ್ಮಣ ಸವದಿ ಅವರು, ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss