ಕೊಡಗು: ಕೊಡಗು ಜಿಲ್ಲಾ ಶ್ವಾನದಳದಲ್ಲಿ ಕಳೆದ 6ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ‘ರ್ಯಾಂಬೋ’ ಹೆಸರಿನ ಶ್ವಾನ ಬುಧವಾರ ಸಂಜೆ ತನ್ನ ಕರ್ತವ್ಯ ಮುಗಿಸಿ ಇಹಲೋಕ ತ್ಯಜಿಸಿದ್ದು, ಗುರುವಾರ ಜಿಲ್ಲಾ ಸಶಸ್ತ್ರ ದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಇಲಾಖಾ ಗೌರವಗಳೊಂದಿಗೆ ಅಚಿತಿಮ ನಮನ ಸಲ್ಲಿಸಲಾಯಿತು.
ಕಳೆದ 6 ವರ್ಷಗಳಿಂದ ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ರ್ಯಾಂಬೋ ಇದುವರೆಗೂ 400ಕ್ಕೂ ಅಧಿಕ ಸ್ಫೋಟಕ ತಪಾಸಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ.
ಕೊಡಗಿನ ತಂಪಾದ ಹವಾಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರ್ಯಾಂಬೋ ಕರ್ತವ್ಯ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ಗೆ ತೆರಳಿದ್ದು, ಬುಧವಾರ ಸಂಜೆ ಕರ್ತವ್ಯ ಮುಗಿಸಿ ಬಂದಾಗ ಆತನಿಗೆ 108 ಡಿಗ್ರಿ ಜ್ವರ ಕಾಡುತ್ತಿತ್ತೆನ್ನಲಾಗಿದೆ. ತಡರಾತ್ರಿವರೆಗೆ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ಆತ ಇಲಾಖೆಯ ಕರ್ತವ್ಯದ ಜೊತೆಗೆ ತನ್ನ ಜೀವನ ಎಂಬ ಡ್ಯೂಟಿಗೂ ಗುಡ್ಬೈ ಹೇಳಿದ್ದಾನೆ.
2013ರ ಅಕ್ಟೋಬರ್ 15ರಂದು ಜನಿಸಿ ಈ ಶ್ವಾನವನ್ನು ನಾಲ್ಕು ತಿಂಗಳ ಬಳಿಕ ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನ ತರಬೇತಿ ಶಿಬಿರದಲ್ಲಿ 9ತಿಂಗಳ ತರಬೇತಿಗೆ ಒಳಪಡಿಸಲಾಗಿತ್ತು. ಆ ಬಳಿಕ ಮಡಿಕೇರಿಯ ಪೊಲೀಸ್ ಶ್ವಾನದ ಸದಸ್ಯನಾಗಿ ಆತ ಸೇರ್ಪಡೆಯಾಗಿದ್ದ. ಅತ್ಯಂತ ಚುರುಕು ಮತ್ತು ಸಾಹಸಮಯ ಪ್ರವೃತ್ತಿಯವನಾಗಿದ್ದರಿಂದ ಆತನಿಗೆ ರ್ಯಾಂಬೋ ಎಂದು ಹೆಸರಿಡಲಾಗಿತ್ತು. ವಿಶೇಷವಾಗಿ ಸ್ಫೋಟಕ ಪತ್ತೆ ಕಾರ್ಯದಲ್ಲಿ ಪರಿಣಿತನಾಗಿದ್ದ ಆತ ಕೊಡಗಿನ ಅಪರಾಧ ಪತ್ತೆ ಕಾರ್ಯ ಸೇರಿದಂತೆ ವಿವಿಧ ಕರ್ತವ್ಯಕ್ಕೆ ನಿಯೋಜಿತನಾಗುತ್ತಿದ್ದ. ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಕಾರ್ಯಕ್ರಮಗಳು ಇದ್ದಾಗ ಮೊದಲು ಸ್ಥಳ ತಪಾಸಣೆ ಮಾಡುತ್ತಿದ್ದ ಶ್ವಾನ ದಳದಲ್ಲಿ ಕೊಡಗಿನ ರ್ಯಾಂಬೋ ಕೂಡಾ ಇರುತ್ತಿದ್ದ. ಬೆಂಗಳೂರಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಏರ್ಶೋದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ಪ್ರಶಂಸನಾ ಪತ್ರ ಪಡೆದಿದ್ದ ರ್ಯಾಂಬೋ ಕೊಡಗು ಪೊಲೀಸ್ಗೆ ಹೆಮ್ಮೆ ತರುವುದರೊಂದಿಗೆ ಮನೆ ಮಗನಂತಾಗಿದ್ದ.
ಕಳೆದ 6 ವರ್ಷಗಳಿಂದ ಈತನನ್ನು ನೋಡಿಕೊಂಡಿದ್ದ ಶ್ವಾನದಳದ ಸುಕುಮಾರ್ ಹಾಗೂ ಜಿತೇಂದ್ರ ರೈ ಅವರುಗಳು’ ಇವನು ಇಷ್ಟು ಬೇಗ ತಮ್ಮನ್ನು ಬಿಟ್ಟು ಹೋಗುತ್ತಾನೆ ಎಂದುಕೊಂಡಿರಲಿಲ್ಲ . ಆತನಿಲ್ಲದ ನಾಳೆಗಳನ್ನು ಯೋಚಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ಇನ್ನೊಂದು ವಾರದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿದ್ದ ರ್ಯಾಂಬೋ ಬಾರದ ಲೋಕಕ್ಕೆ ತೆರಳಿದ್ದಾನೆ.
ಆತನ ಕರ್ತವ್ಯ ಪ್ರಜ್ಞೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಆತನ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸುವುದರೊಂದಿಗೆ ಅಂತಿಮ ಗೌರವನ್ನೂ ಸಲ್ಲಿಸಿದ್ದಾರೆ.