ಮೈಸೂರು: ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಈ ಹಿಂದೆ ಮುಚ್ಚಿದ್ದ ಬಾರ್ನ್ನು ಮತ್ತೆ ತೆರೆಯಲು ಯತ್ನಿಸಿದ ಮಾಲೀಕನಿಗೆ ಗ್ರಾಮಸ್ಥರು ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ. ಆ ಮೂಲಕ ಬಾರ್ ನ್ನು ಮತ್ತೆ ಮುಚ್ಚಿಸಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಗ್ರಾಮದಲ್ಲಿ ಉಗ್ರನರಸಿಂಹ ವೈನ್ ಶಾಪ್ ಎಂಬ ಹೆಸರಿನ ಬಾರ್ ಆರಂಭಿಸಲು ಯತ್ನಿಸಿದಾಗ, ಗ್ರಾಮಸ್ಥರು ತೀವ್ರ ಪ್ರತಿಭಟನೆ, ಹೋರಾಟ ನಡೆಸಿದ್ದರು. ಆದರೂ ಬಾರ್ ಮಾಲೀಕ ಹಠಕ್ಕೆ ಬಿದ್ದು, ಬಾರ್ ತೆರೆದಿದ್ದ, ಆದರೆ ಗ್ರಾಮಸ್ಥರ ಹೋರಾಟಕ್ಕೆ ಕೊನೆಗೂ ಜಿಲ್ಲಾಡಳಿತ ಮಣಿದ ಪರಿಣಾಮ ಬಾರ್ಗೆ ಬೀಗ ಜಡಿಯಲಾಗಿತ್ತು. ಈಗ ಮತ್ತೆ ಅದೇ ಬಾರ್ನ್ನು ಶನಿವಾರ ಬೆಳಗ್ಗೆ
ತೆರೆಯಲು ಮುಂದಾದಾಗ ಆಕ್ರೋಶಗೊಂಡ ಗ್ರಾಮಸ್ಥರು, ಬಾರ್ ಮುಂದೆ ಜಮಾಯಿಸಿ, ಬಲವಂತವಾಗಿ ಬಾಗಿಲು ಮುಚ್ಚಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಬಾರ್ನ ಫ್ಲೆಕ್ಸ್ ಅನ್ನು ಹರಿದುಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಗ್ರಾಮದಲ್ಲಿ ಬಾರ್ ತೆರೆಯಲು ಬಿಡುವುದಿಲ್ಲ ಗುಡುಗಿ, ಪಟ್ಟು ಹಿಡಿದಿದ್ದಾರೆ.
ಬಾರ್ ತೆರೆದರೆ ಯುವಕರು ಕುಡಿತ ಕಲಿತು ಕಳ್ಳತನಕ್ಕೆ ಇಳಿಯುತ್ತಾರೆ. ಗಂಡಸರು ಮನೆಯಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದ ಗ್ರಾಮದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ. ಒಂದು ವೇಳೆ ತೆಗೆಯಲು ಮುಂದಾದರೆ ಮಹಿಳೆಯರು ಬಾರ್ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇಲ್ಲಿ ಬಾರ್ ವಿರುದ್ಧ ಪುರುಷರು-ಮಹಿಳೆಯರು ಒಟ್ಟಿಗೆ ಹೋರಾಟ ಮಾಡುತ್ತಿದ್ದೇವೆ?, ಮುಂದೆಯೂ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದರು.