ಕೊಪ್ಪಳ: ಅಪ್ರಾಪ್ತ ಬಾಲಕಿ ಅಪಹರಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಯುವಕನಿಗೆ ಪೋಕ್ಸೋ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮದ ಅಶೋಕ @ ರವಿ ತಂದೆ ಚಂದಪ್ಪ ಗೋನಾಳ ( 24) ಶಿಕ್ಷೆಗೆ ಗುರಿಯಾದ ಯುವಕ. ಕಳೆದ 2016 ರ ಜೂನ್ ನಲ್ಲಿ ಚಾಕುಲೇಟ್ ಕೊಡುವ ನೆಪದಲ್ಲಿ ಬಾಲಕಿಯನ್ನು ಅಪಹರಣ ಮಾಡಿ ಹುಲಿಗಿ ಗ್ರಾಮದ ಹೊರ ವಲಯಕ್ಕೆ ಹಾಗೂ ಮೈಸೂರು ಚಾಮುಂಡೇಶ್ವರಿ ಬೆಟ್ಟದ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಎಸ್ಐ ಜಯಪ್ರಕಾಶ್ ಹಾಗೂ ಸಿಪಿಐ ಮೋಹನ್ ಪ್ರಸಾದ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಪೋಕ್ಸೋ ಪ್ರಕರಣದಡಿ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ಎಂ.ಜಾಲವಾಡಿ ಅವರು ಸಾಕ್ಷಿ ಆಧಾರಗಳ ಸಹಿತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಯುವಕನಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು.