Monday, July 4, 2022

Latest Posts

ಬಿಜೆಪಿಗೆ ಯಾವುದೇ ಜಾತಿಯಿಲ್ಲ, ಇಲ್ಲಿ ತತ್ವ ಮಾತ್ರ ಪ್ರಮುಖ: ಸಿ.ಟಿ.ರವಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಬಿಜೆಪಿಗೆ ಯಾವುದೇ ಜಾತಿಯಿಲ್ಲ, ಇಲ್ಲಿ ತತ್ವ ಮಾತ್ರ ಪ್ರಮುಖ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷದ ಕಾರ್ಯವಿಸ್ತರಣೆ ಮತ್ತು ನಾಯಕತ್ವ ಬೆಳವಣಿಗೆಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಹತ್ತಾರು ಮೋರ್ಚಾಗಳನ್ನು ಮಾಡಿದ್ದೇವೆ. ಇದರ ಉದ್ದೇಶ ಪಕ್ಷ ಸಂಘಟನೆ. ಆದರೆ ತತ್ವ ಮಾತ್ರ ಒಂದೇ ಅದು ಬದಲಾಗಲು ಸಾಧ್ಯವಿಲ್ಲ ಎಂದರು.
ಬಿಜೆಪಿಯ ಎಲ್ಲಾ ಮೋರ್ಚಾಗಳು ಕಟ್ಟಕಡೆಯ ಮನುಷ್ಯನಿಗೆ ನೆರವಾಗಬೇಕು ಎನ್ನುವ ಅಂತ್ಯೋದಯದ ಕಲ್ಪನೆ ಮುಂದಿಟ್ಟುಕೊಂಡು ಕೆಲಸ ಮಾಡುತ್ತದೆ. ನಾವು ಕೇವಲ ಬಿಜೆಪಿ ನಾಯಕರಷ್ಟೇ ಅಲ್ಲ. ಜನನಾಯಕರಾಗಬೇಕು. ಹಾಗಾದಾಗ ನಾಯಕತ್ವಕ್ಕೆ ಶಕ್ತಿ ಬರುತ್ತದೆ. ಸಮಾಜಕ್ಕೆ ಒಳ್ಳೆಯದನ್ನು ಕೊಡುವ ಸಾಮಥ್ರ್ಯ ಬರುತ್ತದೆ. ಹಾಗೆಂದು ಬರೇ ಪಕ್ಷ ಕಟ್ಟಬೇಕು ಎಂದು ಹೇಳುವುದಿಲ್ಲ. ಅಧಿಕಾರಕ್ಕೆ ಬಲ ಕೊಡುವ ಜೊತೆಗೆ ಅಧಿಕಾರವನ್ನು ಅನುಭವಿಸಬೇಕು ಎಂದರು.
ಸಂಘದ ಶಾಖೆಗಳಲ್ಲಿ ಯಾವುದೇ ಜಾತಿ ಇರುವುದಿಲ್ಲ. ಎಲ್ಲರೂ ಒಟ್ಟಿಗೆ ಬದುಕುವ, ಒಟ್ಟಿಗೆ ಊಟ ಮಾಡುವುದನ್ನು ಕಲಿಸಿಕೊಡುತ್ತದೆ. ದೇಶ ಸಶಕ್ತವಾಗಬೇಕಾದರೆ ಪ್ರತಿ ದೇಶವಾಸಿ ಮುಂದೆ ಬರಬೇಕು ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಬರ ಯೋಜನೆಯನ್ನು ತಂದಿದ್ದಾರೆ. ಪ್ರತಿಯೊಬ್ಬರೂ ಸ್ವಾವಲಂಬಿಯಾಗಬೇಕು ಎನ್ನುವುದು ಇದರ ಆಶಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ಯೋಜನೆಯೂ ಕಟ್ಟಕಡೆಯ ಮನುಷ್ಯರನ್ನು ತಲುಪುವಂತಹದ್ದು, ಜನ್‍ಧನ್ ಯೋಜನೆ ತಂದು ಕೆಳವರ್ಗದವರಿಗೂ ಬ್ಯಾಂಕಿಂಗ್ ಸೌಲಭ್ಯ ದೊರಕಿಸಿದರು. 1986 ರಲ್ಲಿ ಅಂದಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂದ್ರದಿಂದ 100 ರೂ. ಅನುದಾನ ಬಿಡುಗಡೆ ಆದರೆ ಕಟ್ಟಕಡೆ ಮನುಷ್ಯನಿಗೆ ಸಿಗುವುದು ಕೇವಲ 15 ರೂ. ಮಾತ್ರ ಎಂದಿದ್ದರು. ಆಗ ಬಿಜೆಪಿ ಎಂಪಿಗಳಿದ್ದದ್ದು ಕೇವಲ ಇಬ್ಬರು ದೇಶದ ಬಹುತೇಕ ರಾಜ್ಯಗಳು ಸೇರಿದಂತೆ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸಿಗರು ಅಧಿಕಾರದಲ್ಲಿದ್ದರು. ಹಾಗಾದರೆ ಉಳಿದ 85 ರೂ.ಗಳನ್ನು ತಿನ್ನುತ್ತಿದ್ದವರು ಯಾರು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸೇರಿದಂತೆ ಇತರೆ ಪ್ರಕ್ಷಗಳು ಪ್ರಜಾಪ್ರಭುತ್ವದ ಹೆಸರೇಳಿಕೊಂಡು ವಂಶವಾದವನ್ನು ಬಳೆಸಿಕೊಂಡು ಬಂದವು. ಇದು ಪ್ರಜಾಪ್ರಭುತ್ವದ ಅಪಹಾಸ್ಯ. ನೆಹರೂ ನಂತರ ಇಂದಿರಾಗಾಂಧಿ, ನಂತರ ರಾಜೀವ್‍ಗಾಂಧಿ, ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕ ಗಾಂಧಿ, ಶರದ್ ಪವಾರ್, ಸುಪ್ರಿಯಾ ಸುಳೆ, ಮುಲಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಶಿವಪಾಲ್ ಯಾದವ್, ತೇಜಸ್ವಿ ಯಾದವ್, ದೊಡ್ಡ ಗೌಡ್ರು, ಸಣ್ಣಗೌಡ್ರು, ಮರಿಗೌಡ್ರು ಇದು ವಂಶವಾದ ನಮ್ಮ ಪಕ್ಷದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿದರು, ಜಿಲ್ಲಾ ಎಸ್ಸಿ ಮೋರ್ಚಾ ಅರ್ಧಯಕ್ಷ ಕೆ.ಪಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಮುಖಂಡರುಗಳಾದ ನರಸಿಂಹ, ಲಕ್ಷ್ಮಣ್ ನಾಯಕ್, ಹಂಪಯ್ಯ, ನಾಗೇಶ್ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss