ಬೆಳಗಾವಿ: ವಿಶ್ವದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಅದನ್ನು ನಿಭಾಯಿಸುವ ಶಕ್ತಿ ನಮ್ಮ ನಾಯಕರಲ್ಲಿ ಇದೆ. ಯಾರೊ ಒಬ್ಬರು ಊಟಕ್ಕೆ ಕರೆದರು ಎಂದು ಅದನ್ನು ಭಿನ್ನಮತ ಎನ್ನಲು ಸಾಧ್ಯವಿಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಸಮರ್ಥವಾಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ತರಹದ ಭಿನ್ನಮತ ಇಲ್ಲ ಎಂದರು.
ರಾಜ್ಯಸಭಾ ಸ್ಥಾನಕ್ಕೆ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುವ ಶಕ್ತಿ ಬಿಜೆಪಿಯಲ್ಲಿದೆ. ಯಾರೂ ಇದರ ಬಗ್ಗೆ ತಲೆ ಕಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಮೇಶ ಕತ್ತಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ರಮೇಶ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವುದಾಗಿ ಹೇಳಿ ಸಮಾಧಾನ ಪಡಿಸಿದ್ದರು ಈಗ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ ಅಂಗಡಿ, ಸಿಎಂ ಯಡಿಯೂರಪ್ಪನವರು ಸಮರ್ಥರಿದ್ದಾರೆ. ಉಮೇಶ ಕತ್ತಿ ಅವರು ವಿನಾಕಾರಣ ಇಂತಹ ಹೇಳಿಕೆ ನೀಡುವ ಬದಲು ಸಿಎಂ ಎದುರು ಕುಳಿತು ಮಾತುಕತೆ ನಡೆಸುವುದು ಉತ್ತಮ. ಈ ರೀತಿ ಮಾಧ್ಯಮದ ಮುಂದೆ ಹೋಗುವ ಮುನ್ನ ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗ ಪಡಿಸಬಾರದು. ಇದು ಭಿನ್ನಮತ ಅಲ್ಲ. ಯಾರಿಗೂ ಆ ಅವಕಾಶವನ್ನು ಕೊಡುವುದಿಲ್ಲ ಎಂದರು.
ಮಾಜಿ ಸಂಸದ ರಮೇಶ ಕತ್ತಿ ಅನುಭವಿಗಳಿದ್ದಾರೆ. ಹಿರಿಯ ನಾಯಕರಿದ್ದಾರೆ. ಆಸೆ ಪಡುವುದು ಸಹಜ. ಅದನ್ನು ರಸ್ತೆಯಲ್ಲಿ ಹೇಳುವುದು ಸರಿಯಲ್ಲ. ಅದನ್ನು ಸಿಎಂ ಹತ್ತಿರ ಹೇಳಬೇಕು. ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಡಾ. ಪ್ರಭಾಕರ ಕೋರೆ, ರಮೇಶ ಕತ್ತಿ ಅವರಿಗೆ ನೀಡಬೇಕು ಎನ್ನುವುದನ್ನು ರಾಜ್ಯಾಧ್ಯಕ್ಷ ನಳೀನ್ಕುಮಾರ ಕಟೀಲ್, ಸಿಎಂ ಯಡಿಯೂರಪ್ಪ ತೀರ್ಮಾನಿಸುತ್ತಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತಾರೋ ಅವರಿಗೆ ಎಲ್ಲರೂ ಬೆಂಬಲ ನೀಡುತ್ತಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ದೊಡ್ಡ ನಾಯಕರು. ನಮ್ಮಲ್ಲಿ ಬಂಡಾಯ ಎನ್ನುವ ಮಾತೇ ಬರುವುದಿಲ್ಲ. ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ದರಾಗಿರುತ್ತೇವೆ ಎಂದು ಸಚಿವ ಸುರೇಶ ಅಂಗಡಿ ಸ್ಪಷ್ಟಪಡಿಸಿದ್ದರು.