Wednesday, August 10, 2022

Latest Posts

ಬಿಜೆಪಿಯ ಎಸ್‌ಸಿ ಮೋರ್ಚಾ ಪರಿಶಿಷ್ಟರ ನಾಯಕತ್ವ ಪ್ರದರ್ಶನಕ್ಕೆ ಉತ್ತಮ ವೇದಿಕೆ: ನಾರಾಯಣ ಸ್ವಾಮಿ

ಉಡುಪಿ: ಪರಿಶಿಷ್ಟರಲ್ಲಿ ನಾಯಕತ್ವದ ಗುಣಗಳಿದ್ದರೂ ಪ್ರದರ್ಶನ ಮಾಡದೆ, ರಾಜಕೀಯ ನಾಯಕರ ಹಿಂಬಾಲಕರಾಗಿ ಉಳಿದುಕೊಂಡಿದ್ದಾರೆ. ಬಿಜೆಪಿಯ ಎಸ್‌ಸಿ ಮೋರ್ಚಾ ಪರಿಶಿಷ್ಟರ ನಾಯಕತ್ವ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ರಾಜ್ಯ ಮೋರ್ಚಾದ ಅಧ್ಯಕ್ಷ ನಾರಾಯಣ ಸ್ವಾಮಿ ಹೇಳಿದರು.
ಅವರು ಬುಧವಾರ ಬಿಜೆಪಿ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪದಾಧಿಕಾರಿಗಳ ಹಾಗೂ ಮಂಗಳೂರು ವಿಭಾಗ, ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಅತಿದೊಡ್ಡ ಸಮುದಾಯವಾಗಿದ್ದರೂ ರಾಜಕೀಯದಲ್ಲಿ ಪರಿಶಿಷ್ಟ ನಾಯಕರ ಭಾಗವಹಿಸುವಿಕೆ ತೀರಾ ಕಡಿಮೆ ಇದೆ. ಬೆರಳೆಣಿಕೆ ಮುಖಂಡರು ಮಾತ್ರ ಬೆಳೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ವರ್ಗದವರು ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಪರಿಶಿಷ್ಟರನ್ನು ಯಾವ ಸರಕಾರಗಳೂ ಕಡೆಗಣಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಸಮುದಾಯ ಅರಿಯಬೇಕು ಎಂದರು.
ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಎಸ್‌ಸಿ ಸಮುದಾಯ ಬಲವಾಗಬೇಕು. ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾಜದ ಅರ್ಹರಿಗೆ ತಲುಪಿಸುವಂತಹ ಕೆಲಸವನ್ನು ನಾಯಕರು ಮಾಡಬೇಕು. ಸಮಾಜದಲ್ಲಿ ತುಳಿತಕೊಳ್ಳಗಾದವರನ್ನು ಮೇಲೆತ್ತುವಲ್ಲಿ ಕೆಲಸ ಮಾಡಬೇಕು ಎಂದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಂಡಲದ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಸಮುದಾಯದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಬಗೆಹರಿಸಬೇಕು. ಅಧಿಕಾರಿಗಳ ಬೆನ್ನುಬಿದ್ದು ಪರಿಶಿಷ್ಟರಿಗೆ ಮೀಸಲಾದ ಸೌಲಭ್ಯಗಳನ್ನು ಕೊಡಿಸಬೇಕು. ಪ್ರತಿ ಜಿಲ್ಲೆಯಲ್ಲಿ ಲಭ್ಯವಿರುವ ಡಿಸಿ ಮನ್ನಾಭೂಮಿಯ ಮಾಹಿತಿ ಪಡೆದು, ಭೂರಹಿತರಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಸ್‌ಸಿ ಮೋರ್ಚಾ ಮೇಲಿದೆ ಎಂದರು.
ಪರಿಶಿಷ್ಟರ ಉದ್ಧಾರಕ್ಕಾಗಿ ಸರಕಾರ ಜಾರಿಗೊಳಿಸಿರುವ ಯೋಜನೆ ಹಾಗೂ ಸವಲತ್ತುಗಳು ಸಮುದಾಯಕ್ಕೆ ತಲುಪಿಸಬೇಕಾದ ಹೊಣೆಗಾರಿಕೆ ಬಿಜೆಪಿ ಎಸ್‌ಸಿ ಮೋರ್ಚಾ ಮೇಲಿದ್ದು, ಸಮರ್ಥವಾಗಿ ನಿಭಾಯಿಸಬೇಕು. ಜನರು ಪಕ್ಷದ ಮೇಲಿಟ್ಟಿರುವ ನಿರೀಕ್ಷೆಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳೆಂಜಿ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss