Monday, July 4, 2022

Latest Posts

ಬಿಜೆಪಿಯ ತಡೆಯಲು ಕೇರಳದ ಎರಡು ರಂಗಗಳ ಹೆಣಗಾಟ: ಕಾಂಗ್ರೆಸ್ ನಷ್ಟದಲ್ಲಿ ಸಿಪಿಎಂಗೆ ಆಯಿತು ಲಾಭ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇರಳದಲ್ಲಿ ಡಿ.8,10,14 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಲವು ರಾಜಕೀಯ ತಿರುವುಗಳು ಗೋಚರಿಸಿವೆ.ಈ ಬಾರಿ ಬಿಜೆಪಿ ಪ್ರಬಲ ಶಕ್ತಿಯಾಗುವುದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಸಿಪಿಎಂ ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೆಣೆದ ತಂತ್ರ, ಹೊಂದಾಣಿಕೆಗಳ ಫಲವಾಗಿ ಕಾಂಗ್ರೆಸ್ ಕೇರಳದಲ್ಲಿ ಹೀನಾಯ ಸೋಲುಣ್ಣುವಂತಾಗಿದೆ. ಬಿಜೆಪಿ ಉಭಯರಂಗಗಳ ಪ್ರಬಲ ಸವಾಲನ್ನೆದುರಿಸಿಯೂ ತನ್ನ ನೆಲೆಗಳನ್ನು ವಿಸ್ತರಿಸಿರುವುದು ಈ ಬಾರಿಯೂ ಸ್ಪಷ್ಟವಾಗಿ ಗೋಚರಿಸಿದೆ.
ಒಟ್ಟಾರೆ 15962 ಗ್ರಾ.ಪಂ.ಸ್ಥಾನಗಳ ಪೈಕಿ ಎಲ್‌ಡಿಎಫ್ 7211ಸ್ಥಾನಗಳನ್ನು , ಯುಡಿಎಫ್ 5,790, ಬಿಜೆಪಿ ನೇತೃತ್ವದ ಎನ್‌ಡಿಎ 1182 ಹಾಗೂ ಇತರರು 1590 ಸ್ಥಾನಗಳನ್ನು ಪಡೆದುಕೊಂಡಿವೆ.
2080 ಬ್ಲಾ.ಪಂ.ಗಳಲ್ಲಿ ಎಲ್‌ಡಿಎಫ್ 1272, ಯುಡಿಎಫ್ 720, ಎನ್‌ಡಿಎ 39, ಇತರರು 48 ಸ್ಥಾನಗಳನ್ನು ಗಳಿಸಿದ್ದಾರೆ. ಜಿಲ್ಲಾಪಂಚಾಯತ್‌ನ 331 ಸ್ಥಾನಗಳ ಪೈಕಿ ಎಲ್‌ಡಿಎಫ್ 211, ಯುಡಿಎಫ್ 111, ಎನ್‌ಡಿಎ 2, ಇತರರು 6 ಸ್ಥಾನಗಳನ್ನು ಗಳಿಸಿದ್ದಾರೆ. ಮುನ್ಸಿಪಾಲಿಟಿಯ 3078 ಸ್ಥಾನಗಳ ಪೈಕಿ ಎಲ್‌ಡಿಎಫ್ 1167, ಯುಡಿಎಫ್ 1172, ಎನ್‌ಡಿಎ 320, ಇತರರು 416 ಸ್ಥಾನಗಳನ್ನು ಗಳಿಸಿದ್ದಾರೆ. ಮಹಾನಗರ ಪಾಲಿಕೆಗಳ 414 ಸ್ಥಾನಗಳ ಪೈಕಿ ಎಡರಂಗ 207, ಯುಡಿಎಫ್ 120, ಎನ್‌ಡಿಎ 59, ಇತರರು 27ರಲ್ಲಿ ಗೆದ್ದಿದ್ದಾರೆ. 86 ಮುನ್ಸಿಪಾಲಿಟಿಗಳ ಪೈಕಿ ಎಲ್‌ಡಿಎಫ್ 35, ಯುಡಿಎಫ್ 45, ಎನ್‌ಡಿಎ 2, ಇತರರು 4 ಕಡೆ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ.
ಒಟ್ಟು 941 ಗ್ರಾ.ಪಂ.ಗಳಲ್ಲಿ ಎಡರಂಗ 515, ಯುಡಿಎಫ್ 376, ಎನ್‌ಡಿಎ 22, ಇತರರು 28 ಕಡೆಗಳಲ್ಲಿ ಅಧಿಕಾರಕ್ಕೆ ಬರಲು ಸಜ್ಜಾಗಿದ್ದಾರೆ.
ಆರು ಮಹಾನಗರಪಾಲಿಕೆಗಳಲ್ಲಿ 5ನ್ನು (ತಿರುವನಂತಪುರಂ, ಕೊಲ್ಲಂ, ಕೊಚ್ಚಿ, ಕೋಜಿಕ್ಕೋಡ್, ತ್ರಿಶೂರು)ಎಡರಂಗ ಗಳಿಸಿದ್ದರೆ, ಕಣ್ಣೂರು ಮಹಾನಗರಪಾಲಿಕೆ ಮಾತ್ರ ಯುಡಿಎಫ್‌ಗೆ ಸಿಕ್ಕಿದೆ.
ಕಾಂಗ್ರೆಸ್ ಪತನ
ಕಾಂಗ್ರೆಸ್ ಅನೇಕ ಕಡೆಗಳಲ್ಲಿ ಹೀನಾಯ ಸೋಲುಂಡ ಪರಿಣಾಮ ಆಳುವ ಎಡರಂಗ ತನ್ನ ಸ್ಥಾನಬಲವನ್ನು ಹಿಗ್ಗಿಸಿಕೊಂಡು ಬೀಗಲು ಸಾಧ್ಯವಾಗಿದೆ. ಇದೀಗ ಈ ಸೋಲು ಕಾಂಗ್ರೆಸ್‌ನೊಳಗೆ ಭಾರೀ ತುಮುಲ ಸೋಟಗೊಳ್ಳಲೂ ಕಾರಣವಾಗಿದೆ. ರಾಜಧಾನಿ ತಿರುವನಂತಪುರಂ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಆಳುವ ಎಡರಂಗ ಯುಡಿಎಫ್‌ನ ಆಂತರಿಕ ತಿಕ್ಕಾಟವನ್ನೇ ದಾಳವಾಗಿ ಬಳಸಿಕೊಂಡಿತು. ಮುಸ್ಲಿಂಲೀಗಿನೊಳಗಣ ತೀವ್ರ ಅಂತಃಕಲಹವನ್ನು ಎಲ್‌ಡಿಎಫ್ ಬಳಸಿಕೊಂಡಿದ್ದರಿಂದ ಕಾಂಗ್ರೆಸ್ 100 ಸ್ಥಾನಗಳ ಮಹಾನಗರ ಪಾಲಿಕೆಯಲ್ಲಿ ಕೇವಲ 10 ಸ್ಥಾನಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇತ್ತ ಎಲ್‌ಡಿಎಫ್ ಬಿಜೆಪಿ ಎಂದರೆ ಹಿಂದುತ್ವ ಎಂದು ಮುಸ್ಲಿಮರಲ್ಲಿ ಭಯ ಹುಟ್ಟಿಸಿ ಅವರ ಮತಗಳನ್ನು ತನ್ನತ್ತ ಸೆಳೆದುಕೊಂಡು 51 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ 34 ಸ್ಥಾನಗಳನ್ನು ಗೆದ್ದು ಪ್ರಬಲ ಪ್ರತಿಪಕ್ಷವಾಗಿ ಮೂಡಿಬಂದಿದೆ. ಆದಾಗ್ಯೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತಗಳ ಬಹುದೊಡ್ಡ ಪಾಲು ಎಡರಂಗಕ್ಕೆ ವಾಲಿದ್ದರಿಂದ ಸುಮಾರು 8 ಸ್ಥಾನಗಳಲ್ಲಿ ಬಿಜೆಪಿ ಕಡಿಮೆ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಮೂಲಕ ಅಧಿಕಾರ ಪಡೆಯುವುದರಿಂದ ಸ್ವಲ್ಪದರಲ್ಲೇ ವಂಚಿತವಾಯಿತು.
ಎಡರಂಗ ಕಾಂಗ್ರೆಸ್‌ಗೆ ಥ್ಯಾಂಕ್ಸ್ ಹೇಳಲಿ
ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ತನ್ನ ಗೆಲುವಿಗೆ ನೆರವಾದ ಕಾಂಗ್ರೆಸಿಗೆ ಎಡರಂಗ ಥ್ಯಾಂಕ್ಸ್ ಹೇಳಲಿ.ಎರಡು ರಂಗಗಳ ಭಾರೀ ಸವಾಲಿನ ನಡುವೆಯೂ ಬಿಜೆಪಿ ತನ್ನ ನೆಲೆಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿದೆ.ಆದರೆ ಕಾಂಗ್ರೆಸ್ ನೆಲೆಗಳು ತೀವ್ರವಾಗಿ ಕುಸಿಯುತ್ತಿರುವುದು ಕಂಡುಬಂದಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಎಡರಂಗ ಮತ್ತು ಬಿಜೆಪಿ ನಡುವೆಯೇ ಪ್ರಮುಖ ಸ್ಪರ್ಧೆ ಏರ್ಪಡಲಿದೆ. ಕೇರಳ ಕಾಂಗ್ರೆಸ್ ಮುಕ್ತವಾಗುವತ್ತ ವೇಗವಾಗಿ ಸಾಗುತ್ತಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.
ನಾಯಕತ್ವ ವಿರುದ್ಧ ಕಾಂಗ್ರೆಸಿಗರ ಆಕ್ರೋಶ
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ದುರ್ಬಲ ನಾಯಕತ್ವದಿಂದಾಗಿಯೇ ಯುಡಿಎಫ್‌ಗೆ ಹೀನಾಯ ಸೋಲುಂಟಾಗಿದೆ. ಎದುರಾಳಿ ಪಕ್ಷಗಳಾದ ಎಡರಂಗ ಮತ್ತು ಬಿಜೆಪಿ ತನ್ನ ನೆಲೆಗಳನ್ನು ವಿಸ್ತರಿಸಿಕೊಂಡಿದ್ದರೆ, ಕಾಂಗ್ರೆಸ್ ನೆಲೆಗಳು ಕುಸಿತ ಕಂಡಿವೆ.ಇದಕ್ಕೆ ನಾಯಕತ್ವವೇ ಕಾರಣ ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೇರಳದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಅವರ ನಾಯಕತ್ವ ವಿಫಲವಾಗಿರುವುದಾಗಿ ಪಕ್ಷದೊಳಗೆ ಗಂಭೀರ ಆರೋಪ ಕೇಳಿಬಂದಿದೆ. ಕೆ.ಮುರಳೀಧರನ್, ಕೆ.ಸುಧಾಕರನ್, ಕಾಸರಗೋಡು ಸಂಸದ ರಾಜಮೋಹನ್ ಉನ್ನಿತ್ತಾನ್ ಮತ್ತಿತರರು ಕಾಂಗ್ರೆಸ್ ನಾಯಕತ್ವ ವಿರುದ್ಧ ಕಿಡಿ ಕಾರಿದ್ದಾರೆ. ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲೇ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಮಧೂರು ಪಂ.ನಲ್ಲಿ ಬಿಜೆಪಿ ದಾಖಲೆ !
ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾ.ಪಂ.ನಲ್ಲಿ ಬಿಜೆಪಿ ಈ ಬಾರಿಯೂ ಭಾರೀ ಬಹುಮತದೊಂದಿಗೆ ಅಧಿಕಾರವನ್ನು ಮರಳಿ ಗಳಿಸುವ ಮೂಲಕ ದಾಖಲೆ ಮಾಡಿದೆ. 1980 ರಿಂದಲೂ ಮಧೂರು ಪಂಚಾಯತ್‌ನಲ್ಲಿ ಬಿಜೆಪಿ ಸತತ ಅಧಿಕಾರಕ್ಕೆ ಬರುತ್ತಿದ್ದು, 40 ವರ್ಷಗಳ ಈ ಸಾಧನೆ ಒಂದು ದಾಖಲೆಯಾಗಿದೆ ಎಂಬುದಾಗಿ ಬಿಜೆಪಿ ಬೊಟ್ಟು ಮಾಡಿದೆ. ಕೇರಳದ ಶ್ರೀ ಅಯ್ಯಪ್ಪ ಸನ್ನಿಧಾನ ಇರುವ ಪಂದಳಂ ನಗರಪಾಲಿಕೆಯಲ್ಲಿ ಕೂಡಾ ಈ ಬಾರಿ ಬಿಜೆಪಿ ಎಡರಂಗವನ್ನು ಸೋಲಿಸಿ ಅಧಿಕಾರಕ್ಕೇರಿ ಗಮನ ಸೆಳೆದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss