Thursday, August 11, 2022

Latest Posts

ಬಿಜೆಪಿ ಪಕ್ಷದ ಶಿಸ್ತು, ಧ್ಯೇಯ, ನಾಯಕತ್ವದ ಗುಣಗಳ ಬೆಳೆಸಿಕೊಳ್ಳಲು ಪ್ರಶಿಕ್ಷಣ ವರ್ಗ ಸಹಕಾರಿ: ಕಲ್ಮರುಡಪ್ಪ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಪಕ್ಷದ ಶಿಸ್ತು, ಧ್ಯೇಯ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಶಿಕ್ಷಣ ವರ್ಗಗಳು ಸಹಕಾರಿಯಾಗುತ್ತವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹೇಳಿದರು.
ಆಲ್ದೂರು ಸಮೀಪದ ಬೇರುಗಂಡಿ ಬೃಹನ್ಮಠದಲ್ಲಿ ಆಲ್ದೂರು ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಾರ್ಯಕರ್ತರಿಗೆ ಆಯೋಜಿಸಿದ್ದ 2 ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಪಕ್ಷದ ಧ್ಯೇಯಗಳಿಗೆ ಬದ್ದರಾಗಿರಬೇಕು. ಸುಸಂಸ್ಕತರಾಗಿರಬೇಕು. ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಿರಬೇಕು. ತನ್ನ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಿರಿಯ ಕಾರ್ಯಕರ್ತರ ಜೊತೆಗೆ ಯುವ ಹಾಗೂ ಉತ್ಸಾಹಿ ಕಾರ್ಯಕರ್ತರು ಸೇರಿ ಪಕ್ಷವನ್ನು ಸಂಘಟಿಸಬೇಕು. ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದರು.
ಆಲ್ದೂರು ಮಂಡಲದ ಅಧ್ಯಕ್ಷ ದಿನೇಶ್ ಮುಗುಳವಳ್ಳಿ ಮಾತನಾಡಿ, 2 ದಿನಗಳ ಕಾಲ ನಡೆಯುವ ಪ್ರಶಿಕ್ಷಣ ವರ್ಗದಲ್ಲಿ ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಈ ವರ್ಗದಲ್ಲಿ ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳಬೇಕು. ನಿಮ್ಮ ಭವಿಷ್ಯಕ್ಕೆ ಈ ಶಿಕ್ಷಣ ಮಾರ್ಗಸೂಚಿಯಾಗಬೇಕು ಎಂದರು.
ಜಿಲ್ಲಾ ಪಂ ಸದಸ್ಯೆ ಕವಿತಾ ಲಿಂಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜಶೆಟ್ಟಿ, ರವೀಂದ್ರ ಬೆಳವಾಡಿ, ಪ್ರಶಿಕ್ಷಣ ಪ್ರಮುಖ್ ಮಹೇಶ್ ಬೆರಣಗೋಡು, ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್, ಸಂಪತ್ ಹೆಡದಾಳ್, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ಒತ್ತುವರಿ ಕಮಿಟಿ ಸದಸ್ಯೆ ಸುಧಾ ನಾರಾಯಣ ಆಚಾರ್ಯ, ತಾ.ಪಂ. ಸದಸ್ಯರಾದ ಭವ್ಯ, ದೀಪಾ, ಸಾಮಾಜಿಕ ಜಾಲತಾಣ ಹಾಗೂ ಪ್ರಕೋಷ್ಟದ ಪ್ರಥಮ್ , ಯುವ ಮೋರ್ಚಾ ಅಧ್ಯಕ್ಷ ಸಂದೀಪ್, ಶಶಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss