ಹೊಸದಿಗಂತ ವರದಿ,ಮಂಡ್ಯ:
ಬಿಜೆಪಿ ಸೇರ್ಪಡೆಗೊಂಡಿದ್ದ 17 ಜನರ ಪೈಕಿ ವಿಶ್ವನಾಥ್ ಹಾಗೂ ಮುನಿರತ್ನ ಅವರಿಗೂ ಶೀಘ್ರ ಒಳ್ಳೆಯ ಸ್ಥಾನಮಾನಗಳನ್ನು ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇಬ್ಬರಿಗೂ ಉನ್ನತ ಸ್ಥಾನಮಾನ ದೊರೆಯುತ್ತದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಸ್ಪಷ್ಟಪಡಿಸಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಹೊಸಹಳ್ಳಿ ಶನೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ನಮ್ಮ ಗುರುಗಳು, ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ನಾನೂ ಸಹ ಮುಖ್ಯಮಂತ್ರಿಗಳಲ್ಲಿ ಒತ್ತಾಯ ಮಾಡುತ್ತೇನೆ. ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಹೇಳಿದರು.
ಪಕ್ಷದಲ್ಲಿ ಯಾವ ಬಂಡಾಯವೂ ಇಲ್ಲ. ಬಸವರಾಜ್ ಯತ್ನಾಳ್ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಅದಕ್ಕೂ ಇತಿ ಮಿತಿಗಳಿರುತ್ತವೆ. ಈಗಾಗಲೇ ಮುಖ್ಯಮಂತ್ರಿಗಳು ಎಲ್ಲ ಶಾಸಕರೊಂದಿಗೂ ಮಾತನಾಡುತ್ತಿದ್ದಾರೆ. ಸಚಿವ ಸಂಪುಟ ಪುನರ್ರಚನೆ ಸಂದರ್ಭದಲ್ಲಿ ಕೆಲವರಿಗೆ ನಿರಾಶೆ, ಆಕ್ರೋಶ ಆಗುವುದು ಸಹಜ. ಭಿನ್ನಾಭಿಪ್ರಾಯಗಳು ಬರುತ್ತವೆ. ಶೀಘ್ರ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು.
ಸಿಡಿ ವಿಚಾರ ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಅಸಮಾಧಾನವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ನೇತೃತ್ವದ ಉತ್ತಮ ಸರ್ಕಾರ ಆಡಳಿತ ನಡೆಸುತ್ತಿದೆ. ಶೀಘ್ರ ಎಲ್ಲವೂ ಸರಿಹೋಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಚಮಸಾಲಿ ಸ್ವಾಮೀಜಿ ಪಾದಯಾತ್ರೆ ಕೈಗೊಂಡಿರುವುದು ಸರಿಯಲ್ಲ. ಪ್ರತಿಭಟನೆ ಮಾಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಸರ್ಕಾರ ಏನು ತಪ್ಪು ಮಾಡಿದೆ ಎಂದು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಎಲ್ಲರೂ ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಅದು ಬಿಟ್ಟು ಪ್ರತಿಭಟನೆಯಂತಹ ಹಾದಿ ಹಿಡಿಯಬಾರದು ಎಂದು ಸಲಹೆ ನೀಡಿದರು.
ಸಚಿವ ಧರ್ಮಪತ್ನಿ ದೇವಕಿ ನಾರಾಯಣಗೌಡ, ನಗರಸಭಾಧ್ಯಕ್ಷ ಎಚ್.ಎಸ್. ಮಂಜು, ಹೊಸಹಳ್ಳಿ ಶಿವು, ನಾಗೇಶ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.