ಮಡಿಕೇರಿ: ಕೊರೋನಾ ಲಾಕ್ಡೌನ್ ಸಂದರ್ಭ ವಿತರಿಸಲಾದ ಬಿಪಿಎಲ್ ಪಡಿತರ ಚೀಟಿಯ ಅಕ್ಕಿಯನ್ನು ವ್ಯಕ್ತಿಯೊಬ್ಬರು ಮಾರ್ಜಿನ್ ಫ್ರೀ ಅಂಗಡಿಗೆ ತಂದು ಮಾರಾಟ ಮಾಡಿದ ಘಟನೆ ಗೋಣಿಕೊಪ್ಪದಲ್ಲಿ ನಡೆದಿದ್ದು, ಈ ಪ್ರಕರಣವನ್ನು ಸಾರ್ವಜನಿಕರು ಪತ್ತೆಹಚ್ಚಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿಯನ್ನು ವಶಪಡಿಸಿಕೊಂಡು ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಿದ್ದಾರೆ.
ಪಡಿತರ ಅಕ್ಕಿಯನ್ನು ಕಾರಿನಲ್ಲಿ ತಂದ ವ್ಯಕ್ತಿ ತಾ.ಪಂ. ಉಪಾಧ್ಯಕ್ಷರು ಪತ್ತೆಹಚ್ಚಿ ಆಹಾರ ನಿರೀಕ್ಷರಿಗೆ ಸಂದರ್ಭ ಸಿಕ್ಕಿಬಿದ್ದ ಘಟನೆ ಗೋಣಿಕೊಪ್ಪ ಮುಖ್ಯ ರಸ್ತೆಯ ಸಿ.ಹೆಚ್. ಸೂಪರ್ ಮಾರ್ಕೆಟ್ನಲ್ಲಿ ನಡೆದಿದೆ. ಬಿಪಿಎಲ್ ಪಡಿತರ ಅಕ್ಕಿಯನ್ನು ಕೆ.ಜಿ.ಗೆ ರೂ.೧೮ರಂತೆ ಖರೀದಿಸಿದ ಅಂಗಡಿ ಮಾಲೀಕರು ಈ ಹಣಕ್ಕೆ ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳನ್ನು ನೀಡಿದ್ದಾರೆ.
ಗೋಣಿಕೊಪ್ಪದ ಮುಖ್ಯ ರಸ್ತೆಯ ಸಿ.ಹೆಚ್. ಸೂಪರ್ ಮಾರ್ಕೆಟ್ ಮುಂಭಾಗ ಕಾರು ನಿಲ್ಲಿಸಿ ಅಕ್ಕಿ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದ ನಾಗರಿಕರು ಈ ವೀಡಿಯೋವನ್ನು ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಅವರಿಗೆ ನೀಡಿದ್ದಾರೆ. ಚಲನ್ ಅವರು ವೀಡಿಯೋ ತುಣುಕುಗಳನ್ನು ಜಿಲ್ಲಾ ಆಹಾರ ನಿರೀಕ್ಷಕರಿಗೆ ಹಾಗೂ ಗೋಣಿಕೊಪ್ಪ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಆಹಾರ ನಿರೀಕ್ಷಕರ ಸೂಚನೆ ಮೇರೆಗೆ ಆಗಮಿಸಿದ ವೀರಾಜಪೇಟೆ ತಾಲೂಕು ಆಹಾರ ನಿರೀಕ್ಷಕ ಚಂದ್ರ ನಾಯಕ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹಾಗೂ ಪಂಚಾಯ್ತಿ ಸದಸ್ಯ ಸುರೇಶ್ ರೈ ಸಮ್ಮುಖದಲ್ಲಿ ಮಾರ್ಜಿನ್ ಫ್ರೀ ಅಂಗಡಿಗೆ ಭೇಟಿ ನೀಡಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯುವ ಮೂಲಕ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಖ್ಯ ರಸ್ತೆಯಲ್ಲಿ ನಡೆದ ಈ ಬೆಳವಣಿಗೆಗೆ ನೂರಾರು ನಾಗರಿಕರು ಸಾಕ್ಷಿಯಾದರು.
ಸೂಪರ್ ಮಾರ್ಕೇಟ್ಗೆ ೬೧ ಕೆ.ಜಿ. ಪಡಿತರ ಅಕ್ಕಿ ಮಾರಾಟ ಮಾಡಿದ್ದು, ಇದನ್ನು ಕೆ.ಜಿಯೊಂದಕ್ಕೆ ೧೮ ರೂ.ನಲ್ಲಿ ಖರೀದಿ ಮಾಡಿ ಅದಕ್ಕೆ ಬದಲಿಯಾಗಿ ದಿನಸಿ ಸಾಮಾಗ್ರಿಗಳನ್ನು ನೀಡಿರುವುದಾಗಿ ಅಂಗಡಿ ಮಾಲಕರು ನೀಡಿದ ಮಾಹಿತಿ ನೀಡಿದ ಮೇರೆಗೆ ಪಡಿತರ ಅಕ್ಕಿ ಹಾಗೂ ಅದನ್ನು ತಂದ ಕಾರನ್ನು ವಶಪಡಿಸಿಕೊಂಡ ಗೋಣಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಧನುಗಾಲ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಪಡಿತರದಾರರಾದ ಸೈದು ಎಂಬವರು ಪಡಿತರ ಅಕ್ಕಿಯನ್ನು ಪಡೆದು ಇದನ್ನು ಮಾರ್ಜಿನ್ ಫ್ರೀ ಅಂಗಡಿಯಲ್ಲಿ ಮಾರಾಟ ಮಾಡಿ ಬದಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಿರುವುದಾಗಿ ಹೇಳಲಾಗಿದ್ದು, ಪಿಡಿಒ ಶ್ರೀನಿವಾಸ್ ಹಾಗೂ ಆಹಾರ ನಿರೀಕ್ಷಕ ಚಂದ್ರನಾಯಕ್ ಮಹಜರು ನಡೆಸಿದ ನಂತರ ಸಿಹೆಚ್. ಸೂಪರ್ ಮಾರ್ಕೆಟ್ ಮಾಲಕರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.