ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ.
ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದ ಗುಡುಗು ಸಹಿತ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಯವರೆಗೂ ಬಿಟ್ಟುಬಿಟ್ಟು ಮಳೆ ಸುರಿಯಿತು. ಪರಿಣಾಮವಾಗಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿತ್ತು.
ಶುಕ್ರವಾರ ಹಗಲಿನಲ್ಲೂ ಮೋಡ ಕವಿದ ವಾತಾವರಣ ಮನೆಮಾಡಿದ್ದು, ಸಂಜೆ ವೇಳೆಗೆ ಬಿಸಿಲು ಕಾಣಿಸಿಕೊಂಡಿತು.
ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಮೂರು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ಶುಕ್ರವಾರ ಬೆಳಗ್ಗೆ ಜಿಲ್ಲೆಯಲ್ಲಿ ಅಂಗಡಿಮುಂಗಟ್ಟುಗಳು ತೆರೆದುಕೊಂಡರೂ ಮಳೆಯಿಂದಾಗಿ ಗ್ರಾಹಕರೇ ಬಂದಿರಲಿಲ್ಲ. ಬೆಳಗ್ಗೆ 10 ಗಂಟೆ ಬಳಿಕ ಮಳೆ ಬಿಡುವು ನೀಡಿದ ಪರಿಣಾಮ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಒಂದೇ ಬಾರಿಗೆ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಪರಿಣಾಮವಾಗಿ ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಚಾರ ಸುಗಮಗೊಳಿಸಲು ಪೊಲೀಸರು ಪರದಾಡುವಂತಾಯಿತು.
ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ನಾಪೋಕ್ಲು, ನಾಕೂರು, ಮಾದಾಪುರ, ಕಂಬಿಬಾಣೆ, ಕೊಡಗರಹಳ್ಳಿ, ೭ನೇ ಹೊಸಕೋಟೆ ಹಾಗೂ ಕೆದಕಲ್ ವ್ಯಾಪ್ತಿಯಲ್ಲಿ ಎರಡು ಇಂಚಿಗೂ ಅಧಿಕ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.