ಬಂಟ್ವಾಳ: ಕೆಸರುಮಯಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿಯ ಕಾಮಗಾರಿಯ ಹಿನ್ನೆಲೆಯಲ್ಲಿ 20 ದಿನಗಳ ಮಟ್ಟಿಗೆ ಸಂಚಾರವನ್ನು ನಿಷೇಧಿಸಲು ಆದೇಶಿಸುವ ನಿಟ್ಟಿನಲ್ಲಿ ರಾಷ್ಟೀಯ ಹೆದ್ದಾರಿ ಇಲಾಖೆಯು ದ.ಕ.ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.
ರಾಷ್ಟೀಯ ಹೆದ್ದಾರಿ ಇಲಾಖೆಯ ಇಇ ಜಿ.ಎನ್.ಹೆಗ್ಡೆ ಹಾಗೂ ಎಇಇ ಎಚ್.ಪಿ.ರಮೇಶ್ ಅವರ ನಿಯೋಗ ಈ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಹೆದ್ದಾರಿಯ ಒಂದು ಬದಿ 7 ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಯೂರಿಂಗ್ಗಾಗಿ 20 ದಿನಗಳ ಸಮಯಾವಕಾಶ ಬೇಕಿರುವುದರಿಂದ ಸಂಚಾರ ನಿಷೇಧಕ್ಕೆ ಮನವಿ ಮಾಡಿದೆ.
ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಬಿ.ಸಿ.ರೋಡುನಿಂದ ಬೆಳ್ತಂಗಡಿಗೆ ಸಾಗುವ ಘನ ವಾಹನಗಳು ಬಿ.ಸಿ.ರೋಡು-ಉಪ್ಪಿನಂಗಡಿ-ಗುರುವಾ ಯನಕರೆ ಹೆದ್ದಾರಿಯಲ್ಲಿ ಸಂಚರಿಸುವುದು ಹಾಗೆಯೇ ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಂಚಾರಕ್ಕೆ ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಲು ಪತ್ರದಲ್ಲಿ ತಿಳಿಸಲಾಗಿದೆ.
ಇಲ್ಲಿರುವಂತ ಎಂಆರ್ಪಿಎಲ್ ಪೈಪುಲೈನ್ ಕಾಮಗಾರಿಯನ್ನು ಕೂಡ ವೇಗವಾಗಿ ನಡೆಸಲು ಅಧಿಕಾರಿಗಳು ಸೂಚಿಸಿದ್ದು, ಜತೆಗೆ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ನಿರ್ದೇಶಿಸಿದ್ದಾರೆ. ರಾ.ಹೆ.ಇಲಾಖೆಯ ಜೆಇ ಕೇಶವಮೂರ್ತಿ, ಎಇ ಕೀರ್ತಿ ಅಮೀನ್, ಗುತ್ತಿಗೆಯ ಸಂಸ್ಥೆಯ ಶರಣ್ ಗೌಡ, ದಾಮೋದರ್ ಎಂ.ಕೆ. ಜತೆಗಿದ್ದರು. ಬಿ.ಸಿ.ರೋಡ್ ನಿಂದ ಪುಂಜಾಲಕಟ್ಟೆ ವರೆಗಿನ ಹೆದ್ದಾರಿ ಜಕ್ರಿಬೆಟ್ಟು ವರೆಗೆ ಕಾಂಕ್ರೀಟೀಕರಣಗೊಳಿಸಲಾಗುತ್ತಿದ್ದು, ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿದ್ದ ನಿರಂತರ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು,ಸಂಚಾರಕ್ಕೆ ದುಸ್ತರವಾಗಿದೆ.ಘನವಾಹನಗಳು ಸಹಿತ ಲಘವಾಹನಗಳು ಕೆಸರಿನಲ್ಲಿ ಸಿಲುಕಿದ ಪ್ರಸಂಗವು ನಡೆದಿದ್ದು,ಬಹುತೇಕ ವಾಹನಗಳು ಬಂಟ್ವಾಳ ಪೇಟೆಯ ಮೂಲಕವೇ ಸಂಚರಿಸುತ್ತಿದೆ.ಮಂಗಳೂರು-ಧರ್ಮಸ್ಥಳ ನಡುವೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಗಳು ಕೂಡ ಬಂಟ್ವಾಳ ಪೇಟೆಯ ಮೂಲಕವೇ ಸಾಗುತ್ತಿದೆ.