ಬೆಂಗಳೂರು: ಬೀದರ್ ನಲ್ಲಿ ಫೆ.7 ರಿಂದ 9ರವರೆಗೆ ಪಶು ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಮೇಳದ ಸಿದ್ದತೆಗಳ ಕುರಿತಾಗಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಸುಗಳನ್ನು ತರುವವರಿಗೆ ಊಟ, ವಸತಿಯ ವ್ಯವಸ್ಥೆ, ರಾಸುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮನರಂಜನೆ ಕಾರ್ಯಕ್ರಮ ಹಾಗೂ ವಿಚಾರ ಗೋಷ್ಠಿ ಸೇರಿದಂತೆ ತಯಾರಿ ಕುರಿತು ಚರ್ಚಿಸಿದರು.
ಬೀದರ್ ನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ನಡೆಯುತ್ತಿದ್ದು, ಯಾವುದೇ ತರಹದ ಅವಘಡಗಳು ನಡೆಯದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಫೆ.1 ರಿಂದಲೇ ಎಲ್ಲ ಅಧಿಕಾರಿಗಳು ಬೀದರ್ ನಲ್ಲಿ ಹಾಜರಿದ್ದು ಪಶು ಮೇಳದ ಎಲ್ಲ ಸಿದ್ದತೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.
ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ, ಇಲಾಖೆಯ ಆಯುಕ್ತ ನಟೇಶ್, ಜಾನುವಾರ ಸಂಪನ್ಮೂಲದ ಅಪರ ನಿರ್ದೇಶಕ ಮಂಜುನಾಥ ಪಾಳೇಗಾರ್ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.