ಹೊಸ ದಿಗಂತ ವರದಿ ಬೀದರ:
ನಗರದ ಜೆಸ್ಕಾಂ ಕಚೇರಿ ಹಿಂಭಾಗದ ಶರಣ ಉದ್ಯಾನ ಬಡಾವಣೆ ಬಳಿ ನಾಲೆ ನೀರು ಹರಿದು ರಸ್ತೆ ಸೇರಿದಂತೆ ಅಕ್ಕ ಪಕ್ಕದ ಮನೆಗೆ ಚರಂಡಿ ನೀರು ನುಗ್ಗಿದ ಪರಿಣಾಮ ಗಬ್ಬು ವಾಸನೆ ಬರುತ್ತಿದೆ ಹಾಗೂ ನಾಲೆ ನೀರು ಹರಿಯಲು ಒಳಚರಂಡಿ ವ್ಯವಸ್ಥೆ ಇದ್ದರೂ ಸಂಪರ್ಕ ಕಲ್ಪಿಸದ ಕಾರಣ ಚರಂಡಿಯ ನಿಂತ ನೀರಲ್ಲಿ ಸೊಳ್ಳೆಗಳು ಹೆಚ್ಚಾಗಿ ಸುತ್ತಮುತ್ತಲಿನ ಮನೆಯವರಿಗೆ ರೋಗದ ಭೀತಿ ಎದುರಾಗಿದೆ.
ಕೋಟಿ ಕೋಟಿ ಹಣ ಖರ್ಚಾದರೂ ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿರದ ಕಾರಣ ಚರಂಡಿ ನೀರು ರಸ್ತೆಗೆ ಹರಿದು ಬರುತ್ತಿದೆ, ಈ ಕುರಿತು ಬೀದರ ನಗರಸಭೆ ಆಯುಕ್ತರಿಗೆ ಸೇರಿದಂತೆ ಒಳಚರಂಡಿ ವಿಭಾಗದ ಹಾಗೂ ಸ್ವಚ್ಛತೆ ವಿಭಾಗದ ಅಧಿಕಾರಿಗಳಿಗೆ 10 ಬಾರಿ ಚರಂಡಿ ನೀರು ಹರಿದು ಹೋಗಲು ಒಳಚರಂಡಿಗೆ ಸಂಪರ್ಕ ಕಲ್ಪಿಸಲು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.
ತದನಂತರ ಜಿಲ್ಲಾಧಿಕಾರಿಗಳು ಸ್ಥಳ ನಿರೀಕ್ಷಣೆ ಮಾಡಿ ನಗರಸಭೆಯ ಅಧಿಕಾರಿಗಳಿಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೊಳಚೆ ಚರಂಡಿ ನೀರನ್ನು ನಗರಸಭೆ ಕಛೇರಿಯ ಎದುರು ಸುರಿಯುವುದಾಗಿ ಬಡಾವಣೆಯ ನಿವಾಸಿ ರಾಹುಲ ದೇಶಪಾಂಡೆ ಹೊಸ ದಿಗಂತಕ್ಕೆ ಮಾತನಾಡುತ್ತ ನಗರಸಭೆಯ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.