ಗದಗ : ಬೂದಿಹಾಳ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯ ಸೇರಿದಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಭರವಸೆ ನೀಡಿದರು.
ನರಗುಂದ ತಾಲೂಕಿನಲ್ಲಿ ಬುಧವಾರ ತಡರಾತ್ರಿ ಅಧಿಕ ಮಳೆಯಾದ ಪರಿಣಾಮ ಸ್ಥಳಾಂತರಗೊಂಡ ಬೂದಿಹಾಳ ಗ್ರಾಮಕ್ಕೆ ಮಳೆ ನೀರು ಮನೆಗಳಿಗೆ ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿ, ತುರ್ತಾಗಿ ಗ್ರಾಮದಲ್ಲಿ ನಿಂತಿರುವ ನೀರನ್ನು ತೆರವು ಮಾಡುವ ಕಾಮಗಾರಿಯನ್ನು ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು ಹಾಗೂ ಹಳ್ಳವನ್ನು ಅಗಲೀಕರಣ ಮಾಡಿ ನೀರು ಸರಾಗವಾಗಿ ಮುಂದೆ ಸಾಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು ಮನೆಗೆ ನೀರು ನುಗ್ಗಿ ಹಾನಿಗೊಳಗಾದ ಕುಟಂಬಗಳಿಗೆ ಎಸ್.ಟಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಯೋಜನೆಯಡಿ ಶೀಘ್ರವೇ ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದ ಸುತ್ತಲು ಶಾಶ್ವತ ತಡೆಗೊಡೆ ನಿರ್ಮಿಸಲು, ಪಕ್ಕದಲ್ಲಿ ಹರಿದಿರುವ ಹಳ್ಳದ ಅಗಲೀಕರಣ ತುರ್ತಾಗಿ ಕೈಗೊಳ್ಳಬೇಕು, ಗ್ರಾಮದ ಹತ್ತಿರವೇ ಉಳಿದಿರುವ ಖಾಲಿ ಜಮೀನಿನಲ್ಲಿ ಆಶ್ರಯ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಂತೆ ಸಚಿವರಲ್ಲಿ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಳೆ ನೀರು ಮನೆಗೆ ನುಗ್ಗಿ ಮನೆ ಬಳಕೆಯ ಆಹಾರ ಪದಾರ್ಥಗಳು ನೀರು ಪಾಲಾದ ಪರಿಣಾಮ ತಾತ್ಕಾಲಿಕವಾಗಿ ಅದೇ ಗ್ರಾಮದ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು ತಾತ್ಕಾಲಿಕವಾಗಿ ಗ್ರಾಮಸ್ಥರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ತಹಶೀಲ್ದಾರ ಎ.ಎಚ್.ಮಹೇಂದ್ರ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ, ಡಿ.ಎಸ್.ಪಿ. ಶಿವಾನಂದ ಕಟಗಿ, ಸಿ.ಪಿ.ಐ.ಡಿ.ಬಿ.ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.