spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಬೆಂಕಿಯಲ್ಲಿ ಅರಳಿದ ಹೂವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ!

ಪಿ.ರಾಜೇಂದ್ರ

ಇಂದಿರಾಗಾಂಧಿ ನಂತರ, ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಹುದ್ಜೆ ಅಲಂಕರಿಸುವ ಅರ್ಹತೆ ಇದ್ದ ವರ ಮೂವರು , ನಾಲ್ವರು ( ಪಿವಿ ನರಸಿಂಹರಾವ್, ಶರದ್‌ಪವಾರ್. ಮನಮೋಹನಸಿಂಗ್ ) ಪೈಕಿ ಪ್ರಣಬ್‌ಮುಖರ್ಜಿ ಅವರೂ ಒಬ್ಬರು. ಆದರೆ ಈ ಮೇಧಾವಿ ದೇಶದ ಪ್ರಧಾನಿ ಹುದ್ದೆಗೇರಲಿಲ್ಲ . ದೇಶವೇನೋ, ನರಸಿಂಹರಾವ್ ಅಂತಹವರನ್ನು ಆ ಹುದ್ದೆಯಲ್ಲಿ ನೋಡುವಂತಾಯಿತು. ಹಾಗೆಯೇ ಎನ್‌ಡಿಎ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಯಾಗ ಬೇಕೆಂದು ಕನವರಿಸಿದ ದೇಶದ ಬಹುತೇಕ ಮಂದಿಯ ಕನಸೂ ನನಸಾಯಿತು. ಆದರೆ ಈ ಪ್ರಣಬ್ ಮಾತ್ರ ತಮ್ಮ ರಾಜಕೀಯ ಜೀವನದಲ್ಲಿ ಕೊನೆ ದಿನಗಳವರೆಗೂ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡರೂ ಅವರಿಗೆ ಪ್ರಧಾನಿ ಹುದ್ದೆ ಮಾತ್ರ ಲಭ್ಯವಾಗಲಿಲ್ಲ. ಈ ವಾದವನ್ನು ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರು ಒಪ್ಪದೇ ಇರಬಹುದು. ಆದರೆ ಇಂದಿರಾಗಾಂಧಿ , 1984, ಅಕ್ಟೋಬರ್ 31 ರಂದು ತಮ್ಮ ರಕ್ಷಕ ಭಟರಿಂದಲೇ ಗುಂಡೇಟಿಗೆ ಆಹುತಿಯಾದ ಮೇಲೆ ಇವರೇ ದೇಶಕ್ಕೆ ಪ್ರಧಾನಿ ಆಗಬೇಕಿತ್ತು .
ಕಾಂಗ್ರೆಸ್ ಕಟ್ಟಾಳು
ನೆಹರೂ ಕುಟುಂಬ ಮೇಲಿನ ಸ್ವಾಮಿ ನಿಷ್ಠೆ ಎನ್ನುವದಕ್ಕಿಂತ ಪ್ರಣಬ್ ತಮ್ಮ ರಾಜಕೀಯ ಬದುಕಿನಲ್ಲಿ ನಂಬಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು. ದೇಶದ ಆರ್ಥಿಕತೆ ಮತ್ತು ಸಾಮಾನ್ಯನ ಹಣಕಾಸಿನ ಸ್ಥಿತಿ – ಗತಿಗಳ ಬಗ್ಗೆ ಅವರಿಗಿದ್ದ ತಿಳಿವಳಿಕೆ ಮತ್ತು ಜ್ಞಾನ ಅಪಾರ. ಇಂದಿರಾಗಾಂಧಿ ಅವರಿಗೆ ಈ ಮೇಧಾವಿಯ ಅಸಲಿ ತಾಕತ್ತು ಖಂಡಿತವಾಗಿಯೂ ಗೊತ್ತಿತ್ತು. ತಮ್ಮ ಜಾಣ್ಮೆ ಮತ್ತು ಚಾತುರ್‍ಯದಿಂದ ಪ್ರಣವ್ , ಪಿವಿಎನ್ , ಶರತ್, ವೈ ಬಿ ಚವಾಣ್ ಅಂತಹವರನ್ನು ಆಕೆ ಬಳಸಿಕೊಂಡಿದ್ದು ನಿಜ. ಒಂದು ಹಂತದಲ್ಲಿ ನರಸಿಂಹರಾವ್ ಅವರು ತಮ್ಮ ತವರು ರಾಜ್ಯದ ಆಂಧ್ರ ಪ್ರದೇಶದ ಆಂತರಿಕ ರಾಜಕೀಯ ವಿಷಯಗಳಲ್ಲಿ ತಲೆ ಹಾಕಿದರೂ. ಪ್ರಣಬ್ ಮಾತ್ರ ಪಶ್ವಿಮ ಬಂಗಾಳದ ಒಳ ರಾಜಕೀಯ ವಿದ್ಯಮಾನಗಳಲ್ಲಿ ತಮ್ಮ ಮೂಗು ತೂರಿಸಲಿಲ್ಲ ! ಇದನ್ನು ಅವರು ಕೇಂದ್ರ ಮಂತ್ರಿ ಸ್ಥಾನದಲ್ಲಿ ಮುಂದುವರಿದಷ್ಟು ದಿನಗಳೂ ಶಿಸ್ತಿನಿಂದ ಪಾಲಿಸಿಕೊಂಡ ಬಂದ ರಾಜನೀತಿ. ಆದರೆ ಪ್ರಣಬ್ ಪ.ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲಿಲ್ಲ ಎಂಬ ಅಪವಾದವನ್ನೂ ಹೊತ್ತಿದ್ದಾರೆ. ತಾವಾಯಿತು , ತಮ್ಮ ಖಾತೆಯಾಯಿತು ಎಂದು ಸರ್ಕಾರದಲ್ಲಿ ಮಂತ್ರಿಯಾಗಿರುವಷ್ಟು ದಿನ ಶಿಸ್ತಿನ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದರು.
ಆರ್ಥಿಕ ತಜ್ಞ , ವಿದೇ ಶಾಂಗ ಚತುರ
ಪ್ರಣಬ್ ಮುಖರ್ಜಿ ಎಂದರೆ ದೇಶದ ಜನತೆಯ ಕಣ್ ಮುಂದೆ ನಿಲ್ಲುವುದು ಅವರ ವಾರ್ಷಿಕ ಬಜೆಟ್ ಮಂಡನೆ. ಇದಾದ ಮೇಲೆ ಅವರ ವ್ಯಕ್ತಿತ್ವ ವಿಕಾಸಕ್ಕೆ ಮೆರಗು ನೀಡಿದ್ದು ವಿದೇಶಾಂಗ ಖಾತೆ. ದೇಶದ ಕೆಲವೇ ಮಂದಿ ಅಪ್ರತಿಮ ವಿದೇಶಾಂಗ ಮಂತ್ರಿಗಳ ಪೈಕಿ ಪ್ರ ಣಬ್ ಕೂಡಾ ಒಬ್ಬರು. ಕೇವಲ ದೇಶಗಳನ್ನು ಸುತ್ತಾಡುವ ವಿದೇಶಾಂಗ ಮಂತ್ರಿ ಆಗಿದಿದ್ದರೆ ಇವರಿಲ್ಲಿ ಚರ್ಚೆಯೇ ಆಗುತ್ತಿರಲಿಲ್ಲ . ಕೆಲವೊಂದು ವ್ಯಾಪಾರ ವಾಣಿಜ್ಯ ಸಂಬಂಧಗಳ ವಿಷಯದಲ್ಲಿ ಭಾರತದ ಜೊತೆ ಕೈಜೋಡಿಸಲೆತ್ನಿಸಿದ ಶ್ರೀಲಂಕಾ , ಬಾಂಗ್ಲಾ , ನೇಪಾಳ , ಮಾರಿಷಸ್ ಮೊದಲಾದ ದೇಶಗಳ ಜೊತೆ ಸೌಹಾರ್ದತೆ ಸಾಸಲು ಇವರ ಪಾತ್ರ ಮಹತ್ತರದ್ದು . ಹಾಗೆಯೇ ವಿಶ್ವ ವಾಣಿಜ್ಯ ಒಪ್ಪಂದಗಳಲ್ಲದೆ ಬ್ರಿಟನ್, ಅಮೆರಿಕ ದೇಶಗಳ ಅಣ್ವಸ್ತ್ರ ನೀತಿಯು ಭಾರತದ ಮೂಲ ತಳಹದಿ ಮೇಲೆ ಸವಾರಿ ಮಾಡದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಇವರು ವಹಿಸಿದ ಪಾತ್ರ ಅಪಾರ. ಇಂದಿರಾ, ರಾಜೀವ್, ನರಸಿಂಹರಾವ್ ಮತ್ತು ಮನಮೋಹನಸಿಂಗ್ ಸರ್ಕಾರಗಳವರೆಗೂ ಬೃಹತ್ ಖಾತರೆಗಳನ್ನೇ ನಿಭಾಯಿಸಿದ ಇವರು , ಕುರ್ಚಿಗಾಗಿ ಪರಿತಪಿಸಲಿಲ್ಲ . ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂದು ಪಕ್ಷದಲ್ಲಿ ದರ್ಬಾರ್ ಚಲಾಯಿಸಲಿಲ್ಲ . ತೆರೆಯ ಹಿಂದೆ ಲಾಬಿ ಮಾಡಲಿಲ್ಲ . ಪಕ್ಷಕ್ಕಿಂತ ನಾನೇ ದೊಡ್ಡವನೆಂದು ಬೀಗಿ ಹೊಸ ಪಕ್ಷವನ್ನು ಕಟ್ಟಲಿಲ್ಲ ! ಕೇಂದ್ರ ಮಟ್ಟದಲ್ಲಿ ಎತ್ತರೆತ್ತರಕ್ಕೆ ಬೆಳೆದಂತೆ ಅವರು ತಗ್ಗಿ ನಡೆಯಲು ಶುರುಮಾಡಿದರು. ಕಾಂಗ್ರೆಸ್ ಪಕ್ಷದಿಂದ ನನಗೆ ಪರಮ ಅನ್ಯಾಯವಾಯಿತು ಎಂದು ಬಹಿರಂಗವಾಗಿ ಅವರು ಡಂಗುರ ಹಾಕಲಿಲ್ಲ. ಇಂತಹ ಕಟ್ಟಾ ಕಾಂಗ್ರೆಸ್ ಕಾರ್ಯಕರ್ತನೋರ್ವನನ್ನು ನೋಡಿ ಸಾವಿರಪಟ್ಟು ಕಲಿಯುವುದು ಬಹಳಷ್ಟಿದೆ.
ಕಾಂಗ್ರೆಸ್ ಪಕ್ಷದಿಂದಲೇ ಅವರು ರಾಷ್ಟ್ರಪತಿಯಾಗಲು ಸಾಧ್ಯವಾಗಿದ್ದು ಎಂದು ಪಕ್ಷದ ಪ್ರೇಮಿಗಳು ಹೇಳಬಹುದು. ಇದನ್ನೂ ಮಾಡದೇ ಇದ್ದಿದ್ದರೆ, ನೂರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವೇ ಆಗುತ್ತಿತ್ತು . ಇಂತಹ ಅಪರೂಪ ರಾಜಕಾರಣಿ ಆರ್ ಎಸ್ ಎಸ್ ಆಹ್ವಾನವನ್ನು ಒಪ್ಪಿ ಅಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೂ ಚರಿತ್ರೆಯಲ್ಲೊಂದು ಮಹತ್ವ ಪೂರ್ಣ ಘಟ್ಟ. ಒಟ್ಟಿನಲ್ಲಿ ಪ್ರಣಬ್ ಮುಖರ್ಜಿ ಬೆಂಕಿಯಲ್ಲಿ ಅರಳಿದ ಒಂದು ಸುಂದರ , ಸೊಂಪನೆಯ ಹೂವು !

ರಾಜಕಾರಣದಲ್ಲಿ ಎತ್ತರೆತ್ತರ ಕ್ಕೇರಲು ಬರೀ ಸ್ವಾಮಿ ನಿಷ್ಠೆ ಯೊಂದೇ ಮಾನದಂಡವಲ್ಲ . ವ್ಯಕ್ತಿ, ವ್ಯಕ್ತಿತ್ವ ಹಾಗೂ ಪಾರದರ್ಶಕ ರಾಜಕೀಯ ರೀತಿ, ನೀತಿಯಿಂದಲೂ ಜನಮನ್ನಣೆ ಗಳಿಸಲು ಸಾಧ್ಯ ಎಂಬುದಕ್ಕೆ ಇವರೇ ನಿದರ್ಶನ .

 

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap