Thursday, August 11, 2022

Latest Posts

ಬೆಂಗಳೂರಲ್ಲಿ ಪತ್ತೆಯಾದ ‘ಡ್ರಗ್ಸ್ ಡೀಲಿಂಗ್’ ದಂಧೆಗೆ ಕೊಡಗಿನ ನಂಟು: ತನಿಖೆ

ಮಡಿಕೇರಿ: ಬೆಂಗಳೂರಲ್ಲಿ ಪತ್ತೆಯಾದ ‘ಡ್ರಗ್ಸ್ ಡೀಲಿಂಗ್’ ದಂಧೆ ಕೊಡಗು ಜಿಲ್ಲೆಯಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಶಂಕೆ ವ್ಯಕ್ತಗೊಂಡಿದೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಗುರುವಾರ ರಾತ್ರಿ ವೇಳೆಯಲ್ಲಿ ಕುಶಾಲನಗರ ಮತ್ತು ಗುಡ್ಡೆಹೊಸೂರಿನಲ್ಲಿ ಡ್ರಗ್ಸ್ ಮಾಫಿಯಾದ ಆರೋಪಿಗಳನ್ನು ಬಲೆಗೆ ಕೆಡವಲು ಹೊಂಚು ಹಾಕಿದ್ದರೂ ಕೂಡ ಆರೋಪಿಗಳು ಕತ್ತಲೆಯ ನಡುವೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಮೂಲಗಳ ಪ್ರಕಾರ ಕೀನ್ಯಾ ದೇಶದ ಓರ್ವ ಪುರುಷ, ಬೆಂಗಳೂರಿನ ಮೂವರು ಪುರುಷರು ಈ ದಂಧೆಯ ಕಿಂಗ್ ಪಿನ್‍ಗಳಾಗಿದ್ದು ಇವರೆಲ್ಲ ದಾಳಿಯ ಸಂದರ್ಭ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ವಾಹನವನ್ನು ಪರಿಶೀಲಿಸಿದ ಸಂದರ್ಭ ‘ಎಂಎಸ್‍ಆರ್‍ಡಿ’ ಎಂಬ ಬಿಳಿ ಬಣ್ಣದ 300 ಗ್ರಾಂ ಡ್ರಗ್ಸ್ ಪೌಡರ್ ಪತ್ತೆಯಾಗಿರುವುದಾಗಿ ಹೇಳಲಾಗಿದ್ದು, ಇದರ ಮೌಲ್ಯ 7.5 ಲಕ್ಷ ರೂ.ಗಳೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ವಾಹನವನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು, ದಂಧೆಯ ಹಿಂದಿರುವ ಕಾಣದ ಕೈಗಳ ಪತ್ತೆಗಾಗಿ ಕೊಡಗು ಪೊಲೀಸ್ ಇಲಾಖೆ ಸಮನ್ವಯ ಸಾಧಿಸಿ ತನಿಖೆ ನಡೆಸುತ್ತಿರುವುದಾಗಿ ಹೇಳಲಾಗಿದೆ.
ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಹೆಡೆಮುರಿ ಕಟ್ಟಲು ಪ್ರಯತ್ನಿಸಿರುವುದರ ನಡುವೆ ಆ ತಂಡದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಈ 4 ಮಂದಿ ನಿಷೇಧಿತ ಎಂಎಸ್‍ಆರ್‍ಡಿ ಡ್ರಗ್ಸ್‍ನ್ನು ಕೊಡಗು ಜಿಲ್ಲೆಯಲ್ಲಿ ಮಾರಾಟ ಮಾಡಲು ಹೊಂಚು ಹಾಕಿರಬಹುದು ಎಂದು ಶಂಕಿಸಲಾಗಿದೆ.
ದಾಳಿ ಸಂದರ್ಭ ದೊರೆತಿರುವ ಡ್ರಗ್ಸ್‍ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಜರುಗಲಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನಲಾಗಿದೆ. ಆನಂತರವೇ ಪೊಲೀಸರು ಎಫ್‍ಐಆರ್ ದಾಖಲಿಸಲು ಸಿದ್ದತೆ ನಡೆಸುತ್ತಿದ್ದಾರೆಂದು ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss