ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾ. 15 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮಾತನಾಡಿದರು.
ಸಮಾಜ ಪರಿವರ್ತನಾ ಕಾರ್ಯದಲ್ಲಿ 15 ಲಕ್ಷ ಸ್ವಯಂ ಸೇವಕರು: ಕಳೆದ ವರ್ಷ ಆರೆಸ್ಸೆಸ್ ನಡೆಸಿದ ಸರ್ವೇಕ್ಷಣೆಯಲ್ಲಿ ಆರ್.ಎಸ್.ಎಸ್ ನ 15 ಲಕ್ಷ ಸ್ವಯಂ ಸೇವಕರ ಮಾಹಿತಿ ಲಭ್ಯವಾಗಿದೆ. ಅವರು ಮುಂದಿನ ದಿನಗಳಲ್ಲಿ ಆರ್.ಎಸ್.ಎಸ್ 15 ಲಕ್ಷ ಸ್ವಯಂಸೇವಕರನ್ನು ಸಮಾಜ ಪರಿವರ್ತನೆಯ ಚಟುವಟಿಕೆಯಲ್ಲಿ ತೊಡಗಿಸಲಿದೆ ಹಾಗೂ ಈ ಕುರಿತು ರಾಷ್ಟ್ರೀಯ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದರು.
ಈ ಬಾರಿ ರಾಷ್ಟ್ರದ ಕುರಿತಾಗಿ ಮಹತ್ವದ ನಿರ್ಣಯ: ಬೃಹತ್ ಮಟ್ಟದಲ್ಲಿ ಆಯೋಜಿಸಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ರಾಷ್ಟ್ರದ ಕುರಿತಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ.
ಈ ಸಭೆಯಲ್ಲಿ 1500 ಆರೆಸ್ಸೆಸ್ ನ ಪ್ರತಿನಿಧಿಗಳು ಹಾಗೂ ವಿಶೇಷ ಆಹ್ವಾನಿತರು ಭಾಗಿಯಾಗಲಿದ್ದು, ಇದರಲ್ಲಿ 44 ಪ್ರಾಂತಗಳನ್ನೊಳಗೊಂಡ 11 ಕ್ಷೇತ್ರದಿಂದ ಸಂಘದ ಪ್ರತಿನಿಧಿಗಳು, ಸಂಘ ಪರಿವಾರದ 25 ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ರಾಷ್ಟ್ರ ಸೇವಿಕಾ ಸಮಿತಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಆಹ್ವಾನಿತರು: ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ವಿಶ್ವ ಹಿಂದು ಪರಿಷತ್ ನ ಅಧ್ಯಕ್ಷರಾದ ವಿಷ್ಣು ಸದಾಶಿವ ಕೊಕ್ಜೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷರಾದ ಸುಬ್ಬಯ್ಯ ಶಣ್ಮುಗಂ, ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಜೆ. ಪಿ. ನಡ್ಡ, ವನವಾಸಿ ಕಲ್ಯಾಣ, ವಿದ್ಯಾ ಭಾರತಿ, ಸಕ್ಷಮ ಸಂಘಟನೆಗಳ ಅಧ್ಯಕ್ಷರುಗಳು ಮತ್ತು ಇತರ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಕ್ಷೇತ್ರೀಯ ಕರ್ಯವಾಹ್ ನ. ತಿಪ್ಪೇಸ್ವಾಮಿ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.