ಮಂಗಳೂರು: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಗುರುವಾರ ನಗರದ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ವಿಶ್ವ ಹಿಂದು ಪರಿಷತ್ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೈವಾಡ ಈ ಕೃತ್ಯದ ಹಿಂದೆ ಇರುವುದು ಸ್ಪಷ್ಟವಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಇಂತಹ ಸಂಘಟನೆಗಳನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಮಂಗಳೂರಿನಲ್ಲಿ ಈ ಹಿಂದೆ ನಡೆದ ಗಲಭೆ ಪ್ರಕರಣದಲ್ಲೂ ಈ ಸಂಘಟನೆಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು. ಬೆಂಗಳೂರಿನಲ್ಲಿ ನಡೆದ ಗಲಭೆ ಪೂರ್ವನಿಯೋಜಿತ ಕೃತ್ಯವಾಗಿದೆ. ಗಲಭೆಗೆ ಕುಮ್ಮಕ್ಕು ನೀಡಿದವರ ವಿರುದ್ಧವೂ ತನಿಖೆಯಾಗಬೇಕು. ಯಾರೆಲ್ಲ ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದವರು ಆಗ್ರಹಿಸಿದರು.
ವಿಶ್ವಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ಬೆಂಗಳೂರು ಗಲಭೆಯಲ್ಲಿ ಮತೀಯ ಸಂಘಟನೆಗಳ ಪಾತ್ರವಿದೆ. ಆಗಾಗ ಸಮಾಜದ ನೆಮ್ಮದಿ ಕೆಡಿಸುತ್ತಿರುವ ಅಂತಹ ಸಂಘಟನೆಗಳನ್ನು ನಿಗ್ರಹಿಸಬೇಕು. ಮತ್ತೆಂದೂ ಇಂತಹ ಘಟನೆ ಮರುಕಳಿಸಬಾರದು ಎಂದರು.
ಪ್ರತಿಭಟನೆಯಲ್ಲಿ ವಿಹಿಂಪ ದ.ಕ.ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್ವೆಲ್, ಗುರುಪ್ರಸಾದ್ ಉಳ್ಳಾಲ್, ಸೇವಾ ಪ್ರಮುಖ್ ಪ್ರವೀಣ್ ಕುತ್ತಾರ್, ಪ್ರಮುಖರಾದ ದೀಪಕ್ ಮರೋಳಿ, ನವೀನ್ ಮೂಡುಶೆಡ್ಡೆ, ರವಿ ಅಸೈಗೋಳಿ, ಸಂತೋಷ್ ಕದ್ರಿ, ಚರಣ್ ರಾಜ್ ಕುಲಶೇಖರ್, ವಿಜಯ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.