ಬೆಂಗಳೂರು: ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಶಂಕಿತ ಪ್ರಕರಣಗಳು ಕಂಡುಬಂದರೆ ತಕ್ಷಣ ರಾಜ್ಯ ವಿಚಕ್ಷಣ ಘಟಕಕ್ಕೆ ವರದಿ ನೀಡಬೇಕಾಗಿದೆ.
ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವುದರಿಂದ ನಗರದಲ್ಲಿಯೇ ಪ್ರಯೋಗಾಲಯ ಪ್ರಾರಂಭಿಸಲಾಗಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ನಿಮ್ಹಾನ್ಸ್ ಬಳಿಯಿರುವ ಎನ್.ಐ.ವಿ ವೈದ್ಯಕೀಯ ಪ್ರಯೋಗಾಲಯದಲ್ಲಿ ಕೊರೋನಾ ವೈರಸ್ ಶಂಕಿತ ವ್ಯಕ್ತಿಗಳ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ವೈದ್ಯಕೀಯ ವರದಿ ಶೀಘ್ರದಲ್ಲೇ ಪಡೆಯಲು ಸಹಕಾರಿಯಾಗಲಿದೆ. ಜ.21 ರಿಂದ ನಗರದಲ್ಲಿ 43 ಶಂಕಿತರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ 39 ಮಂದಿಯಲ್ಲಿ ಕೊರೋನಾ ವೈರಸ್ ಇಲ್ಲವೆಂಬುದು ದೃಢವಾಗಿದ್ದು, ಇನ್ನು ಐವರ ವರದಿ ಇನ್ನೆರಡು ದಿನಗಳಲ್ಲಿ ಬರಬೇಕಿದೆ.