ವಿಜಯಪುರ: ಬೆಂಗಳೂರಿನ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ, ಗಲಭೆ ಖಂಡನೀಯವಾಗಿದ್ದು, ಈ ಘಟನೆಗೆ ಕಾರಣವಾಗಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಜಿಲ್ಲಾ ಕಾರ್ಯದರ್ಶಿ ಸುನೀಲ ಭೈರವಾಡಗಿ ಮಾತನಾಡಿ, ಬೆಂಗಳೂರಿನ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ದೊಂಬಿ ನಡೆಸಿ, ಬೆಂಕಿ ಹಚ್ಚಿ, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ತೀವ್ರ ಖಂಡನೀಯ. ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧ್ವಂಸಕ್ಕೆ ಯತ್ನಿಸಿದ ಕೃತ್ಯ ಪೂರ್ವನಿಯೋಜಿತವಾಗಿದೆ. ಈ ಘಟನೆಗೆ ಕಾರಣವಾಗಿರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಈ ಗಲಭೆಗೆ ಪ್ರಮುಖ ರೂವಾರಿಯೆಂದು ಬಿಂಬಿಸಲಾಗುತ್ತಿರುವ ಸ್ಥಳೀಯ ಕಾರ್ಪೋರೇಟರ್ ಮುಜಾಯಿಲ್ ಪಾಶಾ ಮತ್ತು ಇತರೆ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ, ಉಗ್ರ ಶಿಕ್ಷೆಗೆ ಗುರುಪಡಿಸಬೇಕು. ಇಂತಹ ಘಟನೆಗಳು ಮತ್ತೆ ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳಬೇಕು ಎಂದರು.
ಗಲಭೆ ನಿಯಂತ್ರಿಸುವಲ್ಲಿ ನಡೆಸಿದ ಪೊಲೀಸ್ ಕಾರ್ಯಾಚರಣೆಯನ್ನು ಸಮರ್ಥಿಸಿ, ಗಲಭೆಯಲ್ಲಿ ಪಾಳ್ಗೊಂಡು ಪೊಲೀಸರಿಂದ ಹತ್ಯೆಯಾದ ಯಾರಿಗೂ ಪರಿಹಾರವನ್ನು ಕೊಡಬಾರದು. ಗಲಭೆಯಿಂದ ಸಂತ್ರಸ್ಥರಾಗಿರುವ ಅಮಾಯಕ ಹಿಂದೂಳಿಗೆ ಪರಿಹಾರವನ್ನು ನೀಡಬೇಕು. ಅಲ್ಪಸಂಖ್ಯಾತರಿಂದ ಬಹುಸಂಖ್ಯಾತರ ಮೇಲೆ ಆಗುತ್ತಿರುವ ಇಂತಹ ದುಷ್ಕೃತ್ಯಗಳು ಮತ್ತೆ ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು. ಕರ್ತವ್ಯ ನಿರತ ಪೊಲೀಸರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಂಡು, ಎನ್ಐಎ ತನಿಖೆಗೊಳಿಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳದ ಈರಣ್ಣ ಹಳ್ಳಿ, ಪ್ರವೀಣ ಹೌದೆ, ಭೀಮಾಶಂಕರ ಹೊನ್ನುಟಗಿ, ಮಾಳಪ್ಪ ದೊಡ್ಡಮನಿ, ಅಜಯ ಕುಂಬಾರ, ಶಿವಪುತ್ರ ಮಜ್ಜಗಿ, ಸುನೀಲ ಕೋರಿ, ಅಶೋಕ ಸಂಕಗೊಂಡ, ಬಸವರಾಜ ಮೂಲಿಮನಿ, ಸುರೇಶ ಕೋಲಕಾರ ಇದ್ದರು.